ನವದೆಹಲಿ: ಕೋವಿಡ್‌ನಿಂದ ಗುಣಮುಖರಾದವರು 'ಕಪ್ಪು ಶಿಲೀಂಧ್ರ' ಸೋಂಕಿನಿಂದ(ಮ್ಯೂಕೋರ್ಮೈಕೋಸಿಸ್ ಅಥವಾ ಬ್ಲ್ಯಾಕ್ ಫಂಗಸ್) ಹೆಚ್ಚು ಬಾಧಿತರಾಗುತ್ತಿದ್ದಾರೆ. ಜತೆಗೆ ಈ ಸೋಂಕು ಪುರುಷರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಅಧ್ಯಯನ ಹೇಳಿದೆ.
ದೀರ್ಘಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರು, ಮದುಮೇಹಿಗಳಲ್ಲಿ ಹತೋಟಿಯಲ್ಲಿಲ್ಲದ ಕೋವಿಡ್ ಸೋಂಕು, ದೀರ್ಘಕಾಲ ಸ್ಟಿರಾಯ್ಡ್ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರಲ್ಲಿ ಈ ಬ್ಲ್ಯಾಕ್ ಫಂಗಸ್ ಅಥವಾ ಮ್ಯುಕಾರ್ ಮೈಕೋಸಿಸ್ ಎಂಬ ಫಂಗಸ್ ಸೋಂಕು ಹೆಚ್ಚಾಗುತ್ತಿರುವುದು ಕಂಡು ಬಂದಿದೆ.
ಕಪ್ಪು ಶಿಲೀಂಧ್ರ ಸೋಂಕಿನಿಂದ ವರದಿಯಾದ ಶೇ 80ರಷ್ಟು ರೋಗಿಗಳು ಪುರುಷರು ಎಂದು ಅಧ್ಯಯನದಿಂದ ದೃಢಪಟ್ಟಿದೆ.
ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿರುವ ರೋಗಿಗಳಲ್ಲಿ ಕಂಡು ಬರುತ್ತಿರುವ ಮ್ಯೂಕೋರ್ಮೈಕೋಸಿಸ್ ಪ್ರಕರಣಗಳ ಇತ್ತೀಚಿನ ಹೆಚ್ಚಳವನ್ನು ಗಮನಿಸಿ ಭಾರತದ 82 ಮಾದರಿ ಸೇರಿದಂತೆ ವಿವಿಧ ದೇಶಗಳ 19 ಬ್ಲ್ಯಾಕ್ ಫಂಗಸ್ ಮಾದರಿಗಳನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು.
ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಪ್ರಿವೆನ್ಶನ್ ಅಂಡ್ ಕಂಟ್ರೋಲ್‌ನ ಪ್ರಕಾರ, 'ಕಪ್ಪು ಶಿಲೀಂಧ್ರ ಸೋಂಕಿನ ಮರಣ ಪ್ರಮಾಣವು ಇಲ್ಲಿಯವರೆಗೆ ಶೇ 30ರಷ್ಟಿದೆ' ಎಂದು ಹೇಳಿದೆ.
ದೇಶದಾದ್ಯಂತ 5,500 ಮಂದಿ ಕಪ್ಪು ಶಿಲೀಂಧ್ರಗಳ ಸೋಂಕಿನಿಂದ ಬಳಲುತ್ತಿದ್ದು, ಇದುವರೆಗೆ 125ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈಗಾಗಲೇ ಹಲವು ರಾಜ್ಯಗಳು ಕಪ್ಪು ಶಿಲೀಂಧ್ರ ಸೋಂಕನ್ನು ಸಾಂಕ್ರಮಿಕ ರೋಗ ಎಂದು ಘೋಷಿಸಿವೆ.