ಪೆರ್ಲ: ಕೋವಿಡ್ ಎರಡನೇ ಅಲೆಯು ವ್ಯಾಪಕವಾಗುತ್ತಿರುವ ನಿಟ್ಟಿನಲ್ಲಿ ಎಲ್ಲೆಡೆಯು ಲಸಿಕೆ ವಿತರಣೆಯು ನಡೆಯುತ್ತಿದೆ. ಈ ನಡುವೆ ಎಣ್ಮಕಜೆ ಗ್ರಾಮ ಪಂಚಾಯತಿನ ವತಿಯಿಂದ ಪೆರ್ಲ ಪಿಎಚ್‍ಸಿ ಸಮೀಪದ ನೂತನ ಕಟ್ಟಡದಲ್ಲಿ ಕೋವಿಡ್ ಲಸಿಕೆ ವಿತರಣಾ ಕೇಂದ್ರವನ್ನು ಆರಂಭಿಸಿದ್ದು ಇಲ್ಲಿನ ನಿರ್ವಹಣಾ ಕೊರತೆಯ ಬಗ್ಗೆ ಪೇಸ್ಬುಕ್ ಪೋಸ್ಟ್ ಗಮನಿಸಿದ ಎಣ್ಮಕಜೆ ಪಂ.ಅಧ್ಯಕ್ಷರು 24 ಗಂಟೆಯೊಳಗೆ ಅದನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಂಡಿರುವುದು ಇದೀಗ ಸಾಮಾಜಿಕ ಜಾಲ ತಾಣ ಮೂಲಕ ವೈರಲಾಗಿದ್ದಾರೆ. ವಿವಿದೆಡೆಗಳಿಂದ ಇವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಪೆರ್ಲದ ಕೋವಿಡ್ ಲಸಿಕೆ ವಿತರಣಾ ಕೇಂದ್ರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಿನ ಜನ ಇದರ ಉಪಯೋಗ ಪಡೆದುಕೊಳ್ಳುತ್ತಿರುವ ನಿಟ್ಟಿನಲ್ಲಿ ಕೆಲವೊಂದು ಪ್ರಾಥಮಿಕ ಅವ್ಯವಸ್ಥೆಗಳು ಅಲ್ಲಿ ಸೃಷ್ಠಿಯಾಗಿತ್ತು. ಈ ಬಗ್ಗೆ ಅಲ್ಲಿಗೆ ಭೇಟಿ ನೀಡಿದ್ದ ಹಿರಿಯ ಪತ್ರಕರ್ತ,ಪರಿಸರ ತಜ್ಞ ಶ್ರೀಪಡ್ರೆ ಅವರು ತಮ್ಮ ಪೇಸ್ಬುಕ್ ಖಾತೆ ಮೂಲಕ ಅಲ್ಲಿ ಸಚಿತ್ರ ಬರಹ ಪ್ರಕಟಿಸಿದ್ದರು.
ಇದನ್ನು ಅರಿತ ಎಣ್ಮಕಜೆ ಪಂಚಾಯತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ತಕ್ಷಣವೇ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ 24 ಗಂಟೆಗಳೊಳಗೆ ಇದಕ್ಕೆ ಸ್ಪಂದಿಸಿ ಕೇಂದ್ರಕ್ಕೆ ಅಗತ್ಯವಾದ ಸೌಕರ್ಯಗಳನ್ನು ಏರ್ಪಡಿಸಿ ವ್ಯವಸ್ಥೆ ಸರಿಪಡಿಸಲು ಆರೋಗ್ಯಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಾತ್ರವಲ್ಲದೆ ಲಸಿಕೆ ಹಾಕಿಸಲು ಬರುವವರಿಗೆ ಕುಳಿತುಕೊಳ್ಳುವ ಆಸನದ ವ್ಯವಸ್ಥೆ,ಶುದ್ಧ ಗಾಳಿ, ಕುಡಿನೀರ ವ್ಯವಸ್ಥೆ, ಸಾಮಾಜಿಕ ಅಂತರ ಪಾಲನೆಯೊಂದಿಗೆ ಹೆಸರು ನೊಂದಾವಣೆ, ವಿಶ್ರಾಂತಿ ಕೊಠಡಿ, ಇನ್ನಿತರ ಸುಗಮ ನಿರ್ವಹಣೆಯ ಬಗ್ಗೆ ಪಂಚಾಯತಿ ಆಡಳಿತ ಸಮಿತಿಯು ಕೋರೊನ ಹೆಲ್ಪ್ ಡೆಸ್ಕ್ ಕಾರ್ಯಕರ್ತರೊಂದಿಗೆ ವ್ಯವಸ್ಥೆ ಮಾಡಿಕೊಟ್ಟಿತು.
ಈ ನಡುವೆ ಸ್ವತಃ ಪಂಚಾಯತಿ ಅಧ್ಯಕ್ಷ ಸೋಮಶೇಖರ್, ಆಡಳಿತ ಸಮಿತಿ ಹಾಗೂ ಜನ ಪ್ರತಿನಿಧಿಗಳ ಜತೆಗೆ ಸ್ಥಳಕ್ಕೆ ತೆರಳಿ ಸುಗಮ ವ್ಯವಸ್ಥೆಯ ಬಗ್ಗೆ ಅವಲೋಕನ ನಡೆಸಿರುವುದು ಮಾದರಿ ಆಡಳಿತದ ಕಾರ್ಯವೈಖರಿ ಎಂದು ಇದೀಗ ನಾಗರಿಕರು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.