ಕಾಸರಗೋಡು: ಕಾಸರಗೋಡಿನಲ್ಲಿ ಟಾಟಾ ಟ್ರಸ್ಟ್ ನಿಂದ 60 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕೋವಿಡ್ ಆಸ್ಪತ್ರೆಗೆ ಮಳೆ ನೀರು ನುಗ್ಗಿದ್ದು ಅಧಿಕಾರಿಗಳಿಗೆ ತಲೆನೋವಿನ ಸಂಗತಿಯಾಗಿದೆ.
128 ಕಸ್ಟಮೈಸ್ಡ್ ಶಿಪ್ಪಿಂಗ್ ಕಂಟೈನರ್ ಗಳನ್ನು ಬಳಕೆ ಮಾಡಿ ತ್ವರಿತವಾಗಿ ಸ್ಥಾಪಿಸಲಾಗಿದ್ದ ಆಸ್ಪತ್ರೆಯಲ್ಲಿ ಬಹುತೇಕ ಎಲ್ಲಾ ಕಂಟೈನರ್ ಗಳೂ ಸೋರಿಕೆಯಾಗುತ್ತಿದ್ದು ಮಳೆ ನೀರು ಆಸ್ಪತ್ರೆಯೊಳಗೆ ನುಗ್ಗಿದೆ ಎಂದು ಸಿಬ್ಬಂದಿಗಳು ಹೇಳಿದ್ದಾರೆ.
ಕಿಟಕಿಗಳ ಅಂಚಿನಿಂದ, ಮೇಲ್ಛಾವಣಿಯಿಂದ ನೀರು ಸೋರಿಕೆಯಾಗುತ್ತಿದ್ದು, ಗಾಳಿ ಜೋರಾಗಿ ಬೀಸಿದರೆ ಮುಂಬಾಗಿಲಿನವರೆಗೂ ನೀರು ಬರುತ್ತದೆ. ರಾತ್ರಿ ವೇಳೆಯಲ್ಲಿ ಸ್ವಚ್ಛತಾ ಸಿಬ್ಬಂದಿಗಳು ಎಚ್ಚರವಿದ್ದು, ಮೋಪ್ ಹಾಗೂ ನೆಲದ ಒರೆಸುವ ಸಾಧನಗಳನ್ನು ಹಿಡಿದು ನೀರನ್ನು ಹೊರ ಹಾಕಬೇಕಾಗುತ್ತದೆ ಎಂದು ಮತ್ತೋರ್ವ ಸಿಬ್ಬಂದಿ ಹೇಳಿದ್ದಾರೆ. ಮಳೆಗಾಲದಲ್ಲಿ ತುರ್ತು ಪರಿಸ್ಥಿತಿಗಳನ್ನು ತಪ್ಪಿಸುವುದಕ್ಕಾಗಿ ಸೋರಿಕೆಯನ್ನು ತಡೆಯಬೇಕಾಗುತ್ತದೆ ಎಂದು ಸಿಬ್ಬಂದಿಗಳು ಹೇಳಿದ್ದಾರೆ.
128 ಶಿಪ್ಪಿಂಗ್ ಕಂಟೈನರ್ ಗಳ ಪೈಕಿ 40 ರಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಕಂಟೈನರ್ ಗಳನ್ನು ಐಸಿಯುವನ್ನಾಗಿ ಪರಿವರ್ತನೆ ಮಾಡಲಾಗಿದೆ. ನೀರು ಸೋರಿಕೆಯಾಗುತ್ತಿರುವಾಗ ಐಸಿಯುನಲ್ಲಿರುವ ವಿದ್ಯುತ್ ನ್ನೂ ತೆಗೆದುಹಾಕುವುದೂ ಸಾಧ್ಯವಾಗುತ್ತಿಲ್ಲ ಎಂದು ನರ್ಸ್ ಓರ್ವರು ಅಲ್ಲಿನ ಸ್ಥಿತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಜಿಲ್ಲಾ ವೈದ್ಯಕೀಯ ಅಧಿಕಾರಿ (ಡಿಎಂಒ) ಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮಳೆ ನೀರು ಸೋರಿಕೆಯಾಗುತ್ತಿರುವುದರ ಬಗ್ಗೆ ಮಾಹಿತಿ ನೀಡಲಾಗಿತ್ತು. ಇದರ ಹೊರತಾಗಿ ಟಾಟಾ ಟ್ರಸ್ಟ್ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿತ್ತು. ಆದರೆ ಈ ವರೆಗೂ ಸಮಸ್ಯೆ ಬಗೆಹರಿದಿಲ್ಲ ಎಂದು ಸಿಬ್ಬಂದಿಗಳು ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಶಿಪ್ಪಿಂಗ್ ಕಂಟೈನರ್ ಗಳನ್ನು ಬಳಸಿ ಟಾಟಾ ಟ್ರಸ್ಟ್ ಸೆಪ್ಟೆಂಬರ್ 9, 2020 ರಲ್ಲಿ ಆಸ್ಪತ್ರೆಯನ್ನು ನಿರ್ಮಿಸಿತ್ತು. ಸಿಎಂ ಪಿಣರಾಯಿ ವಿಜಯನ್ ಆಸ್ಪತ್ರೆಯನ್ನು ಉದ್ಘಾಟಿಸಿದ್ದರು.