ನವದೆಹಲಿ: ಭಾರತದಲ್ಲಿ ಕೊರೊನಾವೈರಸ್ ಲಸಿಕೆಯು ಕಡಿಮೆ ಬೆಲೆಯಲ್ಲಿ ಸಿಗಬೇಕಿದ್ದರೆ ಕೇಂದ್ರ ಸರ್ಕಾರವೇ ಅದನ್ನು ಜಾಗತಿಕ ಮಾರುಕಟ್ಟೆಯಲ್ಲಿ ನಿರ್ವಹಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರ ಬರೆದಿದ್ದಾರೆ.
ಜಾಗತಿಕ ಮಟ್ಟದಲ್ಲಿ ಕೊವಿಡ್-19 ಲಸಿಕೆ ಖರೀದಿ ಟೆಂಡರ್ ನಲ್ಲಿ ರಾಜ್ಯ ಸರ್ಕಾರಗಳು ಭಾಗವಹಿಸಲು ಅನುಮತಿ ನೀಡಿದ್ದಲ್ಲಿ ಪೈಪೋಟಿ ಹೆಚ್ಚುತ್ತದೆ. ಇದರಿಂದ ನೈಸರ್ಗಿಕವಾಗಿ ಲಸಿಕೆಯ ಬೆಲೆಯು ಹೆಚ್ಚಾಗುತ್ತದೆ. ಇದರ ಬದಲಿಗೆ ಕೇಂದ್ರ ಸರ್ಕಾರವೇ ಜಾಗತಿಕ ಮಾರುಕಟ್ಟೆಯಲ್ಲಿ ಲಸಿಕೆಯನ್ನು ಟೆಂಡರ್ ಮೂಲಕ ಕಡಿಮೆ ಬೆಲೆಯಲ್ಲಿ ಖರೀದಿಸಬೇಕು.
ದೇಶದಲ್ಲಿ ವಿವಿಧ ರಾಜ್ಯಗಳಿಗೆ ಅಗತ್ಯಕ್ಕೆ ತಕ್ಕ ರೀತಿಯಲ್ಲಿ ಉಚಿತವಾಗಿ ಕೇಂದ್ರ ಸರ್ಕಾರವೇ ಕೊರೊನಾವೈರಸ್ ಲಸಿಕೆಯನ್ನು ಹಂಚಿಕೆ ಮಾಡಬೇಕು ಎಂದು ಪ್ರಧಾನಮಂತ್ರಿಗೆ ಬರೆದ ಪತ್ರದಲ್ಲಿ ಮುಖ್ಯಂತ್ರಿ ಪಿಣರಾಯಿ ವಿಜಯನ್ ಮನವಿ ಮಾಡಿಕೊಂಡಿದ್ದಾರೆ.
ದೇಶಕ್ಕೆ ಕಡಿಮೆ ಬೆಲೆಯಲ್ಲಿ ಕೊರೊನಾವೈರಸ್ ಲಸಿಕೆ:
ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ನಿಯಂತ್ರಣಕ್ಕೆ ಲಸಿಕೆ ವಿತರಣೆಯೊಂದೇ ಪ್ರಮುಖ ಮಾರ್ಗವಾಗಿದೆ. ಕೊವಿಡ್-19 ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಎಲ್ಲರಿಗೂ ಲಸಿಕೆ ನೀಡುವ ಅನಿವಾರ್ಯತೆಯಿದೆ. ಈ ಹಿನ್ನೆಲೆ ರಾಜ್ಯಗಳಿಗೆ ಹೆಚ್ಚು ಹೆಚ್ಚು ಲಸಿಕೆಯನ್ನು ಹಂಚಿಕೆ ಮಾಡಬೇಕಿದೆ. ಕೇಂದ್ರ ಸರ್ಕಾರವೇ ನೇರವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಟೆಂಡರ್ ಮೂಲಕ ಕೊವಿಡ್-19 ಲಸಿಕೆ ಖರೀದಿಗೆ ಮುಂದಾಗುವುದರಿಂದ ಲಸಿಕೆಗಳು ಕಡಿಮೆ ಬೆಲೆಯಲ್ಲಿ ಸಿಗಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.