ಕಾಸರಗೋಡು: ವಿಧಾನಸಭೆ ಚುನಾವಣೆಯ ಮತಗಣನೆ ಕರ್ತವ್ಯದ ಸಿಬ್ಬಂದಿ ಮತ್ತು ಪತ್ರಕರ್ತರಿಗಾಗಿ ಆಂಟಿಜೆನ್ ತಪಾಸಣೆ ಶುಕ್ರವಾರ(ಏ.30) ಆರಂಭಗೊಂಡಿದ್ದು, ಮೇ.1ರಂದು ಕೂಡ ನಡೆಯಲಿದೆ. ಆರ್.ಟಿ.ಪಿ.ಸಿ.ಆರ್ ತಪಾಸಣೆಗೆ ಒಳಗಾಗಲು ಸಾಧ್ಯವಾಗದೇ ಇರುವ ಮತಗಣನೆಯ ಕರ್ತವ್ಯದಲ್ಲಿರುವ ಸಿಬ್ಬಂದಿ, ಕೌಂಟಿಂಗ್ ಏಜೆಂಟರು ಮತ್ತು ಮತಗಣನೆಯ ವರದಿಗಾರಿಕೆ ನಡೆಸಲಿರುವ ಪತ್ರಕರ್ತರಿಗಾಗಿ ಈ ಸೌಲಭ್ಯ ಏರ್ಪಡಿಸಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಈ ತಪಾಸಣೆ ನಡೆಸಲಾಗುತ್ತಿದೆ. ಕಾಸರಗೋಡು ಜನರಲ್ ಆಸ್ಪತ್ರೆ, ಕಾಞಂಗಾಡು ಜಿಲ್ಲಾ ಆಸ್ಪತ್ರೆ ತಪಾಸಣೆ ಕೇಂದ್ರ ಗಳಲ್ಲಿ ಈ ಸೌಲಭ್ಯಗಳಿವೆ ಎಂದು ಅವರು ಹೇಳಿದರು.