ಕಾಸರಗೋಡು: ಕೋವಿಡ್ ಪ್ರತಿರೋಧ ಚಟುವಟಿಕೆಗಳಿಗೆ ಕಾರಡ್ಕ ಬ್ಲಾಕ್ ಪಂಚಾಯತ್ ಮಾದರಿಯಾಗಿದೆ.
ಅತ್ಯುತ್ತಮ ರೀತಿಯ ಚಟುವಟಿಕೆಗಳೊಂದಿಗೆ ಮಲೆನಾಡ ಗ್ರಾಮಗಳಿಗೆ ಭರವಸೆಯಾಗಿದೆ ಈ ಬ್ಲೋಕ್ ಪಂಚಾಯತ್. ಕೋ-ವೆಹಿಕಲ್, ಕೋವಿಡ್ ಬಾಟೆಲ್ ಟೀಂ, ಕಂಟ್ರೋಲ್ ಸೆಲ್ ಇತ್ಯಾದಿ ಅನೇಕ ಇಲ್ಲಿನ ಪ್ರತಿರೋಧ ಚಟುವಟಿಕೆಗಳು ಗಮನಾರ್ಹವಾಗಿವೆ.
ಕೋ ವೆಹಿಕಲ್:
ಸ್ವಂತ ವಾಹನಗಳಿಲ್ಲದೇ ಇರುವ, ಮನೆಗಳಲ್ಲಿ (ಕ್ವಾರೆಂಟೈನ್ ನಲ್ಲಿ) ಇರುವ ಇತರ ರೋಗಿಗಳಿಗೆ ಅತ್ಯುತ್ತಮ ಸೇವೆ ನೀಡುವ ಯೋಜನೆ ಕೋ ವೆಹಿಕಲ್ ಆಗಿದೆ. ಯೋಜನೆಯ ಅಂಗವಾಗಿ ಈಗಾಗಲೇ 50ಕ್ಕೂ ಅಧಿಕ ವಾಹನಗಳು ಈ ಜನಪರ ಯೋಜನೆಯಲ್ಲಿ ತೊಡಗಿಕೊಂಡಿವೆ.
ಕೋವಿಡ್ ಬಾಟೆಲ್ ಟೀಂ
ಕೋವಿಡ್ ಮಾತ್ರವಲ್ಲದೆ ಯಾವುದೇ ರೋಗಿಗೆ ಪ್ರಾಥಮಿಕ ತಪಾಸಣೆ ನಡೆಸುವ ನಿಟ್ಟಿನಲ್ಲಿ ಬ್ಲೋಕ್ ಪಂಚಾಯತ್ ಜಾರಿಗೊಳಿಸಿರುವ ಯೋಜನೆ ಇದಾಗಿದೆ. ರೋಗಿಯ ಮನೆಗೇ ತೆರಳಿ ಆಕ್ಸಿಜನ್ ಅಳತೆ, ದೈಹಿಕ ಉಷ್ಣಾಂಶ, ರಕ್ತದೊತ್ತಡ ಇತ್ಯಾದಿ ತಪಾಸನೆ ನಡೆಸಿ, ಅಗತ್ಯವಿದ್ದಲ್ಲಿ ಆಸ್ಪತ್ರೆಯ ಚಿಕಿತ್ಸೆಯನ್ನೂ ಕೋವಿಡ್ ಬಾಟೆಲ್ ಟೀಂ ಒದಗಿಸುತ್ತಿದೆ.
24 ತಾಸೂ ಚಟುವಟಿಕೆ ನಡೆಸುವ ಜ್ವರ ಕ್ಲಿನಿಕ್
ಮುಳಿಯಾರು ಸಮುದಾಯ ಆರೋಗ್ಯ ಕೇಂದ್ರದಲ್ಲಿ 24 ತಾಸುಗಲೂ ಚಟುವಟಿಕೆ ನಡೆಸುತ್ತಿರುವ ಕೋವಿಡ್, ಜ್ವರ ಕ್ಲಿನಿಕ್ ಗಮನ ಸೆಳೆಯುತ್ತಿದೆ. ಜೊತೆಗೆ ಆಕ್ಸಿಜನ್ ಸೌಲಭ್ಯ ಸಹಿತ, 25 ಮಂದಿಗೆ ದಾಖಲಾತಿ ಚಿಕಿತ್ಸೆ ಸೌಲಭ್ಯವಿರುವ ಸಿ.ಎಫ್.ಎಲ್.ಟಿ.ಸಿ. ಆರಂಭಿಸುವ ಕ್ರಮ ತ್ವರಿತವಾಗಿದೆ.
ಕೋವಿಡ್ ನಿಯಂತ್ರಣ ಘಟಕ, ಆಂಬುಲೆನ್ಸ್ ಸೇವೆ
ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಳಿಯಾರಿನಲ್ಲಿ ಕೋವಿಡ್ ನಿಯಂತ್ರಣ ಘಟಕ ಆರಂಭಿಸಲಾಗಿದೆ. ಗಂಭೀರ ಸ್ಥಿತಿಯ ರೋಗಿಗಳನ್ನು ತಕ್ಷಣ ಆಸ್ಪತ್ರೆಗೆ ಒಯ್ಯುವ ನಿಟ್ಟಿನಲ್ಲಿ ಪ್ರತ್ಯೇಕ ಆಂಬುಲೆನ್ಸ್ ಸೇವೆ ಬ್ಲೋಕ್ ಪಂಚಾಯತ್ ಸಿದ್ಧಗೊಳಿಸಿದೆ. ಟೆಲಿ ಡಾಕ್ಟರ್ ಸೇವೆ, ಉಚಿತ ಆಂಬುಲೆನ್ಸ್ ಸೇವೆ ಬ್ಲೋಕ್ ಪಂಚಾಯತ್ ಜಾರಿಗೊಳಿಸಿದೆ.
ಸಂಚಾರಿ ವೈದ್ಯಕೀಯ ಘಟಕ
ಬೇಡಗಂ ತಾಲೂಕು ಆಸ್ಪತ್ರೆ ಮತ್ತು ಮುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಬಧಿಸಿ, ವೈದ್ಯಕೀಯ ಸಹಾಯ ಅಗತ್ಯವಿರುವ ಮಂದಿಗೆ ಮನೆಗಳಿಗೇ ತೆರಳಿ ಚಿಕಿತ್ಸೆ ಒದಗಿಸಲು ಸಜ್ಜಾಗಿರುವ ಸಂಚಾರಿ ವೈದ್ಯಕೀಯ ಘಟಕ(ಮೊಬೈಲ್ ಮೆಡಿಕಲ್ ಯೂನಿಟ್) ಆರಂಭಿಸುವ ಕ್ರಮಗಳು ಅಂತಿಮ ಹಂತದಲ್ಲಿವೆ. ಈ ಯೋಜನೆಯನ್ನು ಮೇ 21ರಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಉದ್ಘಾಟಿಸುವರು. ಇಬ್ಬರು ವೈದ್ಯರು, 4 ಮಂದಿ ಸ್ಟಾಫ್ ನರ್ಸ್ ಗಳೂ ಇರುವ 2 ತಂಡಗಳು ಇಲ್ಲಿ ಚಟುವಟಿಕೆ ನಡೆಸಲಿವೆ.