ಕೊಲ್ಲಂ: ರಾಜ್ಯದಲ್ಲೇ ಕೊಲ್ಲಂ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಪ್ಪು ಶಿಲೀಂಧ್ರ ವರದಿಯಾಗಿದೆ. ಪೂಯಪಳ್ಳಿ ಮೂಲದ 42 ವರ್ಷದ ಮಹಿಳೆಗೆ ಈ ರೋಗ ಪತ್ತೆಯಾಗಿದೆ. ಕೊಲ್ಲಂನ ಅಜೀಜಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ ತುರ್ತು ಶಸ್ತ್ರಚಿಕಿತ್ಸೆ ಮಾಡಲಾಯಿತು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ದೃಷ್ಟಿ ಮಂದಗೊಳ್ಳುವಿಕೆ ಮತ್ತು ತೀವ್ರ ತಲೆನೋವಿನಿಂದ ಮಹಿಳೆಯನ್ನು ಆಸ್ಪತ್ರೆಯ ಇ.ಎನ್.ಟಿ ವಿಭಾಗಕ್ಕೆ ದಾಖಲಿಸಲಾಗಿತ್ತು. ಬಳಿಕ ನಡೆಸಿದ ಪರೀಕ್ಷೆಗಳಲ್ಲಿ ಇದು ಕಪ್ಪು ಶಿಲೀಂಧ್ರ ಎಂದು ದೃಢಪಡಿಸಲಾಯಿತು. ಇದು ತುಂಬಾ ಗಂಭೀರವಾಗಿದ್ದರಿಂದ ತಕ್ಷಣ ಡಾ. ಅಶ್ವಿನ್ ರಾಜಗೋಪಾಲ್ ಅವರ ನಿರ್ದೇಶನದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇರಳದಲ್ಲಿ ಮ್ಯೂಕಾರ್ಮೈಕೋಸಿಸ್ ಗೆ ನಡೆಸಿದ ಮೊದಲ ಶಸ್ತ್ರಚಿಕಿತ್ಸೆಯೂ ಇದಾಗಿದೆ .
ಕೊರೋನಾ ರೋಗಿಗಳಲ್ಲಿ ಹೆಚ್ಚಾಗಿ ಕಂಡುಬರುವ ಮ್ಯೂಕಾರ್ಮೈಕೋಸಿಸ್ ಶ್ವಾಸಕೋಶ ಮತ್ತು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಇದು ದೃಷ್ಟಿ ಹೀನತೆ ಮತ್ತು ಕುರುಡುತನಕ್ಕೂ ಕಾರಣವಾಗಬಹುದು. ಮಧುಮೇಹ ಇರುವವರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಈ ಕಾಯಿಲೆಗೆ ಹೆಚ್ಚು ಒಳಗಾಗುತ್ತಾರೆ. ಕೊರೋನಾ ರೋಗಿಗಳಿಗೆ ನೀಡಲಾಗುವ ಸ್ಟೀರಾಯ್ಡ್ ಗಳ ಅತಿಯಾದ ಬಳಕೆಯು ಈ ಖಾಯಿಲೆಗೆ ಕಾರಣವಾಗುವ ಅಂಶವಾಗಿರಬಹುದು ಎಂದು ತಜ್ಞರು ಸೂಚಿಸಿದ್ದಾರೆ.