ತಿರುವನಂತಪುರ: ರಾಜ್ಯದ ಒಂಬತ್ತನೇ ತರಗತಿಯವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ನೇರ ತೇರ್ಗಡೆ ನೀಡುವಂತೆ ಸರ್ಕಾರ ನಿರ್ದೇಶನ ನೀಡಿದೆ. ರಾಜ್ಯದ ಒಂದರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ತರಗತಿ ಬಡ್ತಿ ನೀಡಬೇಕು ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಸ್ತುತ ಕೋವಿಡ್ ಹಿನ್ನೆಲೆಯ ಅಸಾಮಾನ್ಯ ಪರಿಸ್ಥಿತಿಯನ್ನು ಪರಿಗಣಿಸಿ ತರಗತಿ ಬಡ್ತಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮುಂದಿನ ತರಗತಿಗಳಿಗೆ ನೇರ ತೇರ್ಗಡೆ, ವಿನಾಯಿತಿ ಪ್ರಮಾಣಪತ್ರ ಮತ್ತು ಪ್ರವೇಶದ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿದ ಆದೇಶದಲ್ಲಿ ಇದನ್ನು ವ್ಯಕ್ತಪಡಿಸಿದೆ. ಮನೆಯಿಂದಲೇ ಸೌಲಭ್ಯವನ್ನು ಬಳಸಿಕೊಂಡು ಮೇ 25 ರೊಳಗೆ ಬಡ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಶಿಕ್ಷಕರಿಗೆ ನಿರ್ದೇಶನ ನೀಡಿದೆ.
2021-22ನೇ ಸಾಲಿನ ಪ್ರವೇಶ ಬುಧವಾರದಿಂದ ಆರಂಭಗೊಂಡಿದೆ. ಕೊರೊನಾ ಮಾನದಂಡಗಳನ್ನು ಅನುಸರಿಸಿ ಪ್ರವೇಶ ಪ್ರಕ್ರಿಯೆ ನಡೆಯಲಿದೆ. ಲಾಕ್ ಡೌನ್ ಬಳಿಕ, ದಾಖಲೆಗಳನ್ನು ಪರಿಶೀಲಿಸಬೇಕು ಮತ್ತು ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಬಿಡುಗಡೆ ಪ್ರಮಾಣಪತ್ರಕ್ಕಾಗಿ ಅರ್ಜಿಯನ್ನು ಆನ್‍ಲೈನ್‍ನಲ್ಲಿ ಸಲ್ಲಿಸಬಹುದು. ಈ ಕುರಿತು ಸೂಚನೆಗಳನ್ನು ಕೈಟ್ ಮೂಲಕ ಈಗಾಗಲೇ ನೀಡಲು ಸೂಚಿಸಲಾಗಿದೆ.
ಒಂದು ವರ್ಷದ ಅವಧಿಗೆ ಆನ್‍ಲೈನ್ ತರಗತಿಗಳ ಮೂಲಕ ವಿದ್ಯಾರ್ಥಿಗಳು ನಡೆಸುವ ಕಲಿಕಾ ಚಟುವಟಿಕೆಗಳನ್ನು ಪರಿಶೀಲಿಸಲು ಸಹ ಉದ್ದೇಶಿಸಲಾಗಿದೆ. ಇದಕ್ಕಾಗಿ, ಶಿಕ್ಷಕರು ಹೊಸ ತರಗತಿಗಳಿಗೆ ಬಡ್ತಿ ಪಡೆಯುತ್ತಿರುವ ಮಕ್ಕಳನ್ನು ದೂರವಾಣಿ ಮೂಲಕ ಸಂಪರ್ಕಿಸುತ್ತಾರೆ. ಮಕ್ಕಳ ಕಲಿಕೆಯ ಸ್ಥಿತಿ ಮತ್ತು ಭಾವನಾತ್ಮಕ ಹಿನ್ನೆಲೆಯನ್ನು ವಿವರವಾಗಿ ಚರ್ಚಿಸಿ ವರದಿಯನ್ನು ಸಿದ್ಧಪಡಿಸಲಾಗುತ್ತದೆ.