ನವದೆಹಲಿ: ಇಸ್ರೇಲ್-ಪ್ಯಾಲೆಸ್ತೀನ್ ನಡುವೆ ನಡೆದ ಸಂಘರ್ಷದಲ್ಲಿ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟಿದ್ದ ಕೇರಳ ಮೂಲದ ಮಹಿಳೆಯ ಪಾರ್ಥೀವ ಶರೀರವನ್ನು ಭಾರತಕ್ಕೆ ತರಲಾಗಿದೆ.
ಇಸ್ರೇಲ್ ಮತ್ತು ಪ್ಯಾಲೆಸ್ತೇನ್‌ನ ಹಮಾಸ್ ಬಂಡುಕೋರರ ನಡುವಿನ ಸಂಘರ್ಷದ ನಡುವೆಯೇ ಪ್ಯಾಲೆಸ್ತೇನ್‌ನ ರಾಕೆಟ್ ಅಪ್ಪಳಿಸಿದ ಪರಿಣಾಮ, ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ಮಹಿಳೆ ಸೌಮ್ಯ ಮೃತಪಟ್ಟಿದ್ದರು. 31 ವರ್ಷದ ಸೌಮ್ಯ ಅವರು ಇಸ್ರೇಲ್ ನ ಆಶ್ಕೆಲಾನ್‌ನಲ್ಲಿ ನೆಲೆಸಿದ್ದ ನಿವಾಸದ ಮೇಲೆ ಪ್ಯಾಲೆಸ್ತೇನ್‌ನ ರಾಕೆಟ್ ಬಿದ್ದಿದೆ. ಸಂಜೆ ವೇಳೆ ಅವರು ಕೇರಳದಲ್ಲಿರುವ ಪತಿ ಸಂತೋಷ್ ಜತೆ ವಿಡಿಯೋ ಕಾಲ್‌ನಲ್ಲಿ ಮಾತನಾಡುವಾಗಲೇ ಈ ಅವಘಡ ಸಂಭವಿಸಿ ಸೌಮ್ಯ ಸಾವನ್ನಪ್ಪಿದ್ದರು.
ಕೇರಳದ ಇಡುಕ್ಕಿ ಜಿಲ್ಲೆಯ ಕೀರಿಥೊಡು ಮೂಲದವರಾದ ಸೌಮ್ಯ, ಕಳೆದ ಏಳು ವರ್ಷಗಳಿಂದ ಇಸ್ರೇಲ್‌ನಲ್ಲಿ ಮನೆಗೆಲಸದವರಾಗಿ ಕೆಲಸ ಮಾಡುತ್ತಿದ್ದರು. ಇದೀಗ ಸೌಮ್ಯ ಅವರ ಪಾರ್ಥೀವ ಶರೀರವನ್ನು ಭಾರತಕ್ಕೆ ತರಲಾಗಿದ್ದು, ಕೇರಳದಲ್ಲಿರುವ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.
ಕೇಂದ್ರ ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ವಿ ಮುರಳೀಧರನ್ ಹಾಗೂ ಇಸ್ರೇಲ್ ರಾಯಭಾರಿ ರೋನಿ ಯೆಡಿಡಿಯಾ ಕ್ಲೈನ್ ಅವರು ಉಪಸ್ಥಿತರಿದ್ದರು.