ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹಾವಳಿ ಅಧಿಕಗೊಳ್ಳುತ್ತಿದ್ದು, ದ್ವಿತೀಯ ಅಲೆಯ ಅವಧಿಯಲ್ಲಿ ಚಿಕಿತ್ಸಾ ರಂಗದಲ್ಲಿ ದೊಡ್ಡ ಸಾಧನೆಯಾಗಿ ಟಾಟಾ ಟ್ರಸ್ಟ್ ಕೋವಿಡ್ ಆಸ್ಪತ್ರೆ ಚಟುವಟಿಕೆ ನಡೆಸುತ್ತಿದೆ.
ಜೀವನ್ಮರಣ ಹೋರಾಟ ನಡೆಸುತ್ತಿರುವ ಅನೇಕ ಮಂದಿಗೆ ಆರೋಗ್ಯ ಮರಳಿಸಿದ ಈ ಆಸ್ಪತ್ರೆ ನಾಡಿಗೆ ನೀಡುತ್ತಿರುವ ಕೊಡುಗೆ ದೊಡ್ಡದು. 200 ಮಂದಿಗೆ ಏಕಕಾಲಕ್ಕೆ ಚಿಕಿತ್ಸೆ ನೀಡುವ ಸೌಲಭ್ಯ ಈಗ ಇಲ್ಲಿದೆ. ಆಸ್ಪತ್ರೆ ಆರಂಭಗೊಮಡ ನಂತರ ಈ ವರೆಗೆ ಒಟ್ಟು 15245 ಮಂದಿ ಕೋವಿಡ್ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ಲಭಿಸಿದೆ. ಇವರಲ್ಲಿ 1368 ಮಂದಿಗೆ
ಪೂರ್ಣರೂಪದಲ್ಲಿ ರೋಗಮುಕ್ತಿ ಲಭಿಸಿದೆ. ಗಂಭೀರ ಸ್ಥಿತಿಯಲ್ಲಿರುವ ಕ್ಯಾಟಗರಿ ಬಿ.ಸಿ. ರೋಗಿಗಳಿಗೆ ಪ್ರಧಾನವಾಗಿ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು 12 ಐ.ಸಿ.ಯು. ಬೆಡ್ ಗಳು, ಸುಮಾರು 70 ಸೆಂಟ್ರಲೈಸ್ಡ್ ಆಕ್ಸಿಜನ್ ಪೈಪ್ ಲೈನ್ ಸೌಲಭ್ಯವಿರುವ ಬೆಡ್ ಗಳು ಇಲ್ಲಿ ಸಜ್ಜುಗೊಂಡಿವೆ. ಈಗಾಗಲೇ 86 ಮಂದಿ ಗಂಭೀರ ಸ್ಥಿತಿಯ ರೋಗಿಗಳು ಮರಳಿ ಸಹಜ ಜೀವನಕ್ಕೆ ತೆರಳಲು ಇಲ್ಲಿನ
ಚಿಕಿತ್ಸೆ ಮೂಲಕ ಸಾಧ್ಯವಾಗಿದೆ. ಇವರಲ್ಲಿ 7 ಮಂದಿಯ ಸ್ಥಿತಿ ಉಲ್ಭಣಾವಸ್ಥೆಯಲ್ಲಿದ್ದು, ವೆಂಟಿಲೇಟರ್ ಮೂಲಕದ ಚಿಕಿತ್ಸೆ ನೀಡಲಾಗಿತ್ತು.
ಒಂದು ಕಂಟೈನರ್ ನಲ್ಲಿ 4 ಬೆಡ್ ಗಳು ಎಂಬ ಗಣನೆಯಲ್ಲಿ 540 ಮಂದಿಗೆ ಚಿಕಿತ್ಸಾ ಸೌಲಭ್ಯ ಇಲ್ಲಿ ಸಜ್ಜುಗೊಂಡಿದೆ. ಆದರೆ ಕಚೇರಿ ಸೌಲಭ್ಯ, ಪ್ರಯೋಗಾಲಯ, ಔಷಧಾಲಯ, ಫಾರ್ಮಸಿ ಸ್ಟೋರ್, ಸಿಬ್ಬಂದಿಯ ವಸತಿ ಇತ್ಯಾದಿಗಳ ಸಜ್ಜೀಕರಣ ನಡೆದಿಲ್ಲ. ಐ.ಸಿ.ಯು. ವಾರ್ಡ್ ಗಳು ಸಜ್ಜೀಕರಿಸುವ ವೇಳೆ ಒಂದು ಕಂಟೈನರ್ ನಲ್ಲಿ 3 ಬೆಡ್ ಗಳು ಮಾತ್ರ ಸಜ್ಜೀಕರಿಸಲು ಸದ್ಯ. ಬೆಡ್ ಗಳ ಅಂತರ ಇನ್ ಫೆಕ್ಷನ್ ಕಂಟ್ರೋಲ್ ತಳಹದಿಯಲ್ಲಿ ಸಜ್ಜುಗೊಳಿಸಬೇಕಿದೆ. ಈ ಕಾರಣದಿಂದ ಎಲ್ಲ ಕಂಟೈನರ್ ಗಳ ಚಿಕಿತ್ಸಾ ಸೌಲಭ್ಯ ನಡೆಸಲು ಸಾಧ್ಯವಾಗದೇ ಹೋಗಿದೆ.
ಕೊರೋನಾ ಮೊದಲ ಅಲೆಯಲ್ಲಿ ಜಿಲ್ಲಾ ಆಸ್ಪತ್ರೆ ಸಂಪೂರ್ಣ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸುವ ಅನಿವಾರ್ಯತೆಯಿತ್ತು. ಈ ಬಾರಿ ಅತಿ ತೀವ್ರ ರೂಪದ ಹರಡುವಿಕೆಯ ಹಂತದಲ್ಲೂ ಕೋವಿಡ್ ಚಿಕಿತ್ಸೆ ಒದಗಿಸಲು ಟಾಟಾ ಆಸ್ಪತ್ರೆ ಸಿದ್ಧವಾಗಿದೆ. 191 ಹುದ್ದೆಗಳು ವಿವಿಧ ವಿಭಾಗಗಳಲ್ಲಿ ಇಲ್ಲಿ ಸರಕಾರ ಸೃಷ್ಟಿಸಿದೆ. ಇದರಲ್ಲಿ ಬಹುತೇಕ ಹುದ್ದೆಗಳಲ್ಲಿ ನೇಮಕಾತಿ ನಡೆದು ಚಟುವಟಿಕೆ ಸುಗಮವಾಗಿದೆ.