ತಿರುವನಂತಪುರ: ಮೇ ಮಧ್ಯದ ವೇಳೆಗೆ ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ತೀವ್ರವಾಗಲಿದೆ ಎಂಬ ಎಚ್ಚರಿಕೆ ನೀಡಲಾಗಿದೆ. ಟಿಪಿಆರ್ ಪ್ರಸ್ತುತ ಎಂಟು ಜಿಲ್ಲೆಗಳಲ್ಲಿ 25 ಕ್ಕಿಂತ ಹೆಚ್ಚಿದೆ. ರಾಜ್ಯದಲ್ಲಿ ದೃಢಪಡಿಸಲಾದ ಪ್ರಕರಣಗಳ ಪ್ರಮಾಣ 10.31 ಆಗಿದೆ. ರಾಷ್ಟ್ರೀಯ ಸರಾಸರಿ 6.92 ಮಾತ್ರವಿದ್ದು, ಈ ಹಿನ್ನೆಲೆಯಲ್ಲಿ ಕೇರಳದ ಸೋಂಕಿನ ಮಟ್ಟ ರಾಷ್ಟ್ರದ ಸರಾಸರಿಗಿಂತ ಹೆಚ್ಚಿರುವುದು ಆತಂಕ ಮೂಡಿಸಿದೆ. ಮಲಪ್ಪುರಂ, ಎರ್ನಾಕುಳಂ ಮತ್ತು ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ಪರೀಕ್ಷಿಸಿದ 100 ಜನರಲ್ಲಿ 30 ಕ್ಕೂ ಹೆಚ್ಚು ಜನರಿಗೆ ಕೊರೋನಾ ಪತ್ತೆಯಾಗಿದೆ. ತ್ರಿಶೂರ್, ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಪರಿಸ್ಥಿತಿ ನಿರ್ಣಾಯಕವಾಗಿದೆ. ತಿರುವನಂತಪುರನಲ್ಲಿ ರೋಗಿಗಳ ಸಂಖ್ಯೆ ದಿನಕ್ಕೆ 4,000 ಕ್ಕೆ ಏರಿಕೆಯಾಗಬಹುದು ಎಂದು ಎಚ್ಚರಿಸಲಾಗಿದೆ.
ಸೋಂಕು ಹರಡುವಿಕೆಯಿಂದಾಗಿ ಕಳೆದ ಐದು ದಿನಗಳಲ್ಲಿ ರಾಜ್ಯದಲ್ಲಿ 248 ಜನರು ಸಾವನ್ನಪ್ಪಿದ್ದಾರೆ. ತಿರುವನಂತಪುರ ವೈದ್ಯಕೀಯ ಕಾಲೇಜಿನ ತಜ್ಞರ ತಂಡವೊಂದರ ಪ್ರಕಾರ, ಇನ್ನೂ ಎರಡು ವಾರಗಳವರೆಗೆ ರೋಗಿಗಳ ಸಂಖ್ಯೆ ಏರಿಕೆಯಾಗಲಿದೆ. ಪತ್ತನಂತಿಟ್ಟು, ಆಲಪ್ಪುಳ, ಕೊಟ್ಟಾಯಂ, ತ್ರಿಶೂರ್ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಏಕಾಏಕಿ ಉಲ್ಬಣಗೊಂಡಿರುವುದು ಕಂಡುಬರುತ್ತದೆ. ಅದರಂತೆ ಪ್ರತಿ ಜಿಲ್ಲೆಯ ಐಸಿಯು ಹಾಸಿಗೆಗಳ ಸಂಖ್ಯೆಯನ್ನು ಅಗತ್ಯವಿರುವಂತೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಹೇರುವಿಕೆಯ ಬಗ್ಗೆ ಸರ್ಕಾರ ಪರಿಗಣಿಸುತ್ತಿದೆ ಎನ್ನಲಾಗಿದೆ. ಲಾಕ್ ಡೌನ್ ಮಾಡಲು ಆರೋಗ್ಯ ಇಲಾಖೆ ಶಿಫಾರಸು ಮಾಡಿದೆ. ಮುಂದಿನ ಭಾನುವಾರದವರೆಗೆ ಈಗಿರುವ ನಿಬಂಧನೆಗಳು ಜಾರಿಯಲ್ಲಿರಲಿದ್ದು, ಮುಂದಿನ ಸೋಮವಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿದುಬಂದಿದೆ.