ಬೆಂಗಳೂರು: ನಾಡಿನ ಸಾಕ್ಷಿಪ್ರಜ್ಞೆಯಂತಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಎಚ್.ಎಸ್.ದೊರೆಸ್ವಾಮಿ (104) ಅವರು ಬುಧವಾರ ಮಧ್ಯಾಹ್ನ 1:40ರ ಸುಮಾರಿಗೆ ಹೃದಯಾಘಾತದಿಂದ ನಗರದ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ದೊರೆಸ್ವಾಮಿ ಹೃದಯದ ಸಮಸ್ಯೆ ಹಿನ್ನೆಲೆಯಲ್ಲಿ ಇಲ್ಲಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಹೃದಯದ ಕಾಯಿಲೆ, ಅಧಿಕ ರಕ್ತದೊತ್ತಡ, ಶ್ವಾಸನಾಳಗಳ ಒಳಪೊರೆಯ ಉರಿಯೂತ (ಬ್ರಾಂಕೈಟಿಸ್) ಸಹಿತ ವಿವಿಧ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆಂದು ವೈದ್ಯಕೀಯ ಮೂಲಗಳು ಖಚಿತಪಡಿಸಿವೆ.
ಕೆಲದಿನ ಹಿಂದೆಯಷ್ಟೇ ಹೃದಯ ಸಮಸ್ಯೆ ಹಿನ್ನೆಲೆಯಲ್ಲಿ ಇಲ್ಲಿನ ಜಯದೇವ ಹೃದ್ರೋಗ ಆಸ್ಪತ್ರೆ ದಾಖಲಾಗಿದ್ದ ದೊರೆಸ್ವಾಮಿ ಅವರಿಗೆ ಜ್ವರ ಹಾಗೂ ಕೆಮ್ಮಿನ ಸಮಸ್ಯೆ ಕಾರಣ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಆಗ ಅವರಿಗೆ ಸೋಂಕು ದೃಢಪಟ್ಟಿತ್ತು. ಮೇ 6ರಿಂದ 12ರವರೆಗೆ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೋವಿಡ್ ಸೋಂಕು ಗೆದ್ದು ಮನೆಗೆ ಮರಳಿದ್ದ ದೊರೆಸ್ವಾಮಿ ಅವರು, ತಮ್ಮ ಜಯನಗರದಲ್ಲಿರುವ ನಿವಾಸದಲ್ಲಿ ಚೇತರಿಸಿಕೊಳ್ಳುತ್ತಿದ್ದರು.
ಆದರೆ, ಮೇ 14ಕ್ಕೆ ಪುನಃ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆ ದಾಖಲಾಗಿದ್ದು ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದಾರೆ. ಪುತ್ರ ರಾಜು ದೊರೆಸ್ವಾಮಿ ಹಾಗೂ ಪುತ್ರಿ ವೀಣಾ ಸಹಿತ ಅಪಾರ ಸಂಖ್ಯೆಯ ಬಂಧು-ಮಿತ್ರರು ಹಾಗೂ ರೈತ, ದಲಿತ, ಹಿಂದುಳಿದ, ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಹೋರಾಟಗಳ ಒಡನಾಡಿಗಳನ್ನು ದೊರೆಸ್ವಾಮಿ ಅವರು ಅಗಲಿದ್ದಾರೆ.
ಬೆಂಗಳೂರು ಸಮೀಪದ ಹಾರೋಹಳ್ಳಿಯ ಐಯ್ಯರ್ ಕುಟುಂಬದಲ್ಲಿ 1918ರ ಎಪ್ರಿಲ್ 10ರಂದು ಜನಿಸಿದ ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ ಅವರು, 50 ಜನರಿದ್ದ ಕೂಡು ಕುಟುಂಬದಲ್ಲಿ ಬೆಳೆದವರು. ಪ್ರಾಥಮಿಕ ಶಿಕ್ಷಣ ಮುಗಿಸುವಷ್ಟರಲ್ಲಿ, ತಂದೆಯನ್ನು ಕಳೆದುಕೊಂಡ ದೊರೆಸ್ವಾಮಿ ಅವರು ಅಜ್ಜನ ಆರೈಕೆಯಲ್ಲಿ ಬೆಳೆದು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದರು. ಇಲ್ಲಿನ ವಿ.ವಿ.ಪುರಂನಲ್ಲಿ ಮಾಧ್ಯಮಿಕ, ಚಾಮರಾಜಪೇಟೆಯ ಕೋಟೆ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ ಕಲಿತರು. ಆ ದಿನಗಳಲ್ಲಿಯೇ ಮಹಾತ್ಮ ಗಾಂಧಿಯವರ `ಮೈ ಅರ್ಲಿ ಲೈಫ್' ಪುಸ್ತಕ ಓದಿ, ಪ್ರಭಾವಿತರಾಗಿ, ಅವರ ವಿಚಾರಧಾರೆಗೆ ಮನಸೋತು ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು.
ಎ.ಜಿ.ರಾಮಚಂದ್ರರಾಯರಂತಹ ಹಿರಿಯರ ಮಾರ್ಗದರ್ಶನದಲ್ಲಿ ಸರಕಾರಿ ಕಚೇರಿಗಳಿಗೆ ಸಿಡಿಮದ್ದು ಇಟ್ಟು, 14 ತಿಂಗಳುಗಳ ಕಾಲ ಸೆರೆಮನೆ ವಾಸ ಅನುಭವಿಸಿದರು. ದೊರೆಸ್ವಾಮಿ ಅವರು, 1942ರಲ್ಲಿ ಬಿಎಸ್ಸಿ ಪದವಿ ಪೂರೈಸಿ, ಗಾಂಧಿನಗರದ ಹೈಸ್ಕೂಲಿನಲ್ಲಿ ಶಿಕ್ಷಕನಾಗಿ ಕೆಲಸ ಮಾಡಿದರು. ನಂತರ ಮೈಸೂರಿಗೆ ತೆರಳಿ 1947ರಲ್ಲಿ ಸಾಹಿತ್ಯ ಮಂದಿರ ಎಂಬ ಪ್ರಕಟಣಾ ಸಂಸ್ಥೆ ಸ್ಥಾಪಿಸಿ ಪುಸ್ತಕ ಮಳಿಗೆ ತೆರೆದರು.
ಬರವಣಿಗೆ ಮೂಲಕ ಜನರನ್ನು ಜಾಗೃತರನ್ನಾಗಿಸಬಹುದೆಂದು ಪತ್ರಿಕೆ ಆರಂಭಿಸಿ, ಮೈಸೂರು ಚಲೋ ಚಳವಳಿ ಕುರಿತು ಲೇಖನಗಳನ್ನು ಬರೆದರು. ನಂತರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಬ್ರಿಟಿಷರ ವಿರುದ್ಧ ಪತ್ರಿಕೆಯನ್ನು ಪ್ರಬಲ ಅಸ್ತ್ರವನ್ನಾಗಿ ಪ್ರಯೋಗಿಸತೊಡಗಿದರು. ಸರಕಾರ ಪತ್ರಿಕೆಯನ್ನು ಮುಟ್ಟುಗೋಲು ಹಾಕಿತು. ಸ್ವಾತಂತ್ರ್ಯಾ ನಂತರ ತಮ್ಮ 31ನೆ ವಯಸ್ಸಿನಲ್ಲಿ ಲಲಿತಮ್ಮ ಎಂಬ 19ರ ಹರೆಯದ ಯುವತಿಯನ್ನು ವಿವಾಹವಾದರು.
ಬಳಿಕ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇತ್ತೀಚಿನವರೆಗಿನ ರೈತ, ದಲಿತ, ಹಿಂದುಳಿದ, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಹೋರಾಟಗಳಲ್ಲಿಯೂ ದೊರೆಸ್ವಾಮಿ ಮುಂಚೂಣಿಯಲ್ಲಿರುತ್ತಿದ್ದರು. ಯಾವುದೇ ಹೋರಾಟ, ಧರಣಿ ಸತ್ಯಾಗ್ರಹ, ಚರ್ಚೆ, ಸಂವಾದ, ವಿಚಾರ ಸಂಕಿರಣ, ಕಾರ್ಯಾಗಾರಗಳಿದ್ದರೂ ಅಲ್ಲಿ ದೊರೆಸ್ವಾಮಿಯವರ ಹಾಜರಾತಿ ನಿಶ್ಚಿತವಾಗಿರುತ್ತಿತ್ತು. ಕಳೆದ 2019ರ ಡಿಸೆಂಬರ್ ನಲ್ಲಿ ಪತ್ನಿ ಲಲಿತಮ್ಮನವರು ದೊರೆಸ್ವಾಮಿಯವರನ್ನು ಅಗಲಿದ್ದರು.
ದೊರೆಸ್ವಾಮಿ ಅವರಿಗೆ ಗಾಂಧಿಸೇವಾ ಪುರಸ್ಕಾರ, ಬಸವ ಪುರಸ್ಕಾರ, ರಾಮ್‍ನಾಥ್ ಗೋಯೆಂಕಾ ಜರ್ನಲಿಜಂ ಪ್ರಶಸ್ತಿ ಸೇರಿದಂತೆ ಹತ್ತು-ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ:
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಅಂತ್ಯಕ್ರಿಯೆನ್ನು ಇಲ್ಲಿನ ಚಾಮರಾಜಪೇಟೆ ಚಿತಾಗಾರದಲ್ಲಿ ಬುಧವಾರ ಸಂಜೆ ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಮಾರ್ಗಸೂಚಿ ಪಾಲಿಸಿ, ಅಂತರ ಕಾಯ್ದುಕೊಂಡು ಕನಿಷ್ಠ ಪೊಲೀಸ್ ಸಿಬ್ಬಂದಿಯೊಂದಿಗೆ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.