ಹೈದರಾಬಾದ್: ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ಎರಡನೇ ರವಾನೆ ಹೈದರಾಬಾದ್ ತಲುಪಿದೆ. ಈ ಸಂದರ್ಭದಲ್ಲಿ ರಷ್ಯಾದ ಭಾರತೀಯ ರಾಯಭಾರಿ ಎನ್ ಕುಡಶೇವ್ ಮಾತನಾಡಿ ಕೊರೋನಾ ರೂಪಾಂತರಿ ವಿರುದ್ಧ ಹೋರಾಡಲು ಸ್ಪುಟ್ನಿಕ್ ವಿ ಅತ್ಯಂತ ಪರಿಣಾಮಕಾರಿ ಲಸಿಕೆ ಎಂದು ರಷ್ಯಾದ ವಿಶೇಷ ತಜ್ಞರು ಘೋಷಿಸಿದ್ದಾರೆ ಎಂದಿದ್ದಾರೆ.
ಸ್ಪುಟ್ನಿಕ್ ವಿಯ ಕಾರ್ಯದಕ್ಷತೆ, ದೇಹದ ಮೇಲೆ ಆಗುವ ಪರಿಣಾಮ ಬಗ್ಗೆ ಜಗತ್ತಿಗೆ ಗೊತ್ತಿದೆ. 2020ರ ದ್ವಿತೀಯಾರ್ಧದಲ್ಲಿಯೇ ರಷ್ಯಾದಲ್ಲಿ ಇದರ ಬಳಕೆ ಆರಂಭಿಸಿ ಜನರ ಮೇಲೆ ಸಕಾರಾತ್ಮಕ ಪರಿಣಾಮ ಉಂಟುಮಾಡಿದೆ ಎಂದು ಹೇಳಿದ್ದಾರೆ.
ಸ್ಪುಟ್ನಿಕ್ ವಿ ಲಸಿಕೆಯನ್ನು ಈಗಾಗಲೇ ಭಾರತದಲ್ಲಿ ನೀಡಲು ಆರಂಭಿಸಲಾಗಿದೆ. ಹೈದರಾಬಾದ್ ನ ಡಾ.ರೆಡ್ಡೀಸ್ ಸಂಸ್ಥೆ ವಿತರಣೆಯನ್ನು ಆರಂಭಿಸಿದ್ದು, ಮೊದಲ ಬಾರಿಗೆ ಹೈದರಾಬಾದ್ ನಲ್ಲಿಯೇ ನೀಡಲಾಯಿತು. ಭಾರತದಲ್ಲಿ ಕೂಡ ಇದರ ತಯಾರಿ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
ಸ್ಪುಟ್ನಿಕ್ ವಿ ರಷ್ಯಾ-ಭಾರತದ ಲಸಿಕೆಯಾಗಿದೆ. ಇದರ ಉತ್ಪಾದನೆಯನ್ನು ಪ್ರತಿವರ್ಷಕ್ಕೆ 850 ಮಿಲಿಯನ್ ಡೋಸ್ ಗೆ ಹೆಚ್ಚಿಸಲಾಗುತ್ತಿದೆ. ಭಾರತದಲ್ಲಿ ಸ್ಪುಟ್ನಿಕ್ ಲೈಟ್ ಲಸಿಕೆಯ ಒಂದೇ ಡೋಸ್ ಲಸಿಕೆಯನ್ನು ಪರಿಚಯಿಸುವ ಉದ್ದೇಶವಿದೆ ಎಂದು ಕುಡಶೇವ್ ಹೇಳಿದ್ದಾರೆ.