ನವದೆಹಲಿ: ಟೂಲ್ ಕಿಟ್ ವಿವಾದದ ನಡುವೆ ತಿರುಚಿದ ಮಾಧ್ಯಮ ವಿಚಾರ ಕುರಿತಂತೆ ಟ್ವಿಟರ್ ಸಂಸ್ಥೆಯೊಂದಿಗಿನ ತನ್ನ ಸಂವಹನದ ಬಗ್ಗೆ ಐಟಿ ಸ್ಥಾಯಿ ಸಮಿತಿ, ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಪತ್ರ ಬರೆದಿತ್ತು. ಅದರ ಬಗ್ಗೆ ಸಮಗ್ರ ಪ್ರತಿಕ್ರಿಯೆಯನ್ನು ಪಡೆದಿದೆ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಬುಧವಾರ ಹೇಳಿದ್ದಾರೆ.
ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕೇಂದ್ರ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದ್ದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ವಾಗ್ದಾಳಿ ನಡೆಸಿರುವ ತರೂರ್, ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ಸ್ಪಷ್ಟನೆಯೊಂದನ್ನು ಬಯಸುವುದು ಸಮಿತಿಯ ಆದೇಶದ ವ್ಯಾಪ್ತಿಯೊಳಗೆ ಇರುತ್ತದೆ ಎಂದಿದ್ದಾರೆ.
ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರವೊಂದನ್ನು ಬರೆದಿರುವ ಬಿಜೆಪಿ ಸಂಸದ,ಟೂಲ್ ಕಿಟ್ ವಿಚಾರಕ್ಕೆ ಸಂಬಂಧಿಸಿದಂತೆ ಶಶಿ ತೂರೂರ್ ಇತ್ತೀಚಿಗೆ ನೀಡಿರುವ ಕೆಲ ಹೇಳಿಕೆಗಳನ್ನು ಉಲ್ಲೇಖಿಸಿದ್ದರು. ಕೇಂದ್ರ ಸರ್ಕಾರದ ವರ್ಚಸ್ಸನ್ನು ಕಡಿಮೆ ಮಾಡಲು ತನ್ನ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಶಶಿ ತರೂರ್, ತಿರುಚಿದ ಮಾಧ್ಯಮ ವಿವಾದಕ್ಕೆ ಸಂಬಂಧಿಸಿದಂತೆ ಮಾಹಿತಿ ತಂತ್ರಜ್ಞಾನ ಸಚಿವಾಲಯ ಟ್ವಿಟರ್ ನೊಂದಿಗೆ ಸಂಪರ್ಕದ ಬಗ್ಗೆ ಸಮಿತಿ ಕಾರ್ಯದರ್ಶಿ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಇ-ಮೇಲ್ ಮೂಲಕ ಪತ್ರ ಬರೆದಿದ್ದು, ಮೇ 26 ರಂದು ಸಮಗ್ರ ಪ್ರತಿಕ್ರಿಯೆ ಪಡೆಯಲಾಗಿದೆಯ ಇದನ್ನು ಎಲ್ಲಾ ಸದಸ್ಯರ ಮಾಹಿತಿಗಾಗಿ ಹಂಚಲಾಗಿದೆ ಎಂದು ಶಶಿ ತರೂರ್ ಸರಣಿ ಟ್ವೀಟ್ ಮಾಡಿದ್ದಾರೆ.
ನಾಗರಿಕರ ಹಕ್ಕುಗಳನ್ನು ಕಾಪಾಡುವುದು ಮತ್ತು ಸಾಮಾಜಿಕ, ಆನ್‌ಲೈನ್ ಮಾಧ್ಯಮಗಳ ದುರುಪಯೋಗ ತಡೆಗಟ್ಟುವ ಬಗ್ಗೆ ಸಮಿತಿ ಈಗಾಗಲೇ ಪರಿಶೀಲನೆ ನಡೆಸುತ್ತಿದೆ. ಆದ್ದರಿಂದ ಈ ವಿಷಯದ ಬಗ್ಗೆ ಸಚಿವಾಲಯದಿಂದ ಸ್ಪಷ್ಟನೆ ಪಡೆಯುವುದು ಸಮಿತಿಯ ಆದೇಶದ ವ್ಯಾಪ್ತಿಯಲ್ಲಿರುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.