ನವದೆಹಲಿ: ಕೊರೋನಾ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರವನ್ನು ಗುರಿಯಾಗಿಸಲು ಬಳಸಿದ ಕಾಂಗ್ರೆಸ್ ಟೂಲ್‌ಕಿಟ್‌ನ ಸಂಬಂಧ ಟ್ವೀಟ್ ಗಳಿಗಾಗಿ 'ಮ್ಯಾನಿಪ್ಯುಲೇಟೆಡ್ ಮೀಡಿಯಾ' (ತಿರುಚಲ್ಪಟ್ಟ ಸುದ್ದಿ) ಟ್ಯಾಗ್ ಬಳಕೆ ಮಾಡಿದ್ದ ಟ್ವಿಟ್ಟರ್ ಕ್ರಮಕ್ಕೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ವಿಷಯವು ಕಾನೂನು ಜಾರಿ ಸಂಸ್ಥೆಯ ಮುಂದೆ ಬಾಕಿ ಇರುವುದರಿಂದ 'ಮ್ಯಾನಿಪ್ಯುಲೇಟೆಡ್ ಮೀಡಿಯಾ' ಟ್ಯಾಗ್ ಅನ್ನು ತೆಗೆದುಹಾಕುವಂತೆ ಸರ್ಕಾರ ಟ್ವಿಟ್ಟರ್ ಗೆ ಸೂಚಿಸಿದೆ ಮತ್ತು ಈ ವಿಷಯವು ತನಿಖೆಯಲ್ಲಿರುವ ವೇಳೆ ಸಾಮಾಜಿಕ ಮಾಧ್ಯಮ ವೇದಿಕೆ ತಾನು ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.ತನಿಖೆಯು ವಿಷಯದ ನಿಖರತೆಯನ್ನು ನಿರ್ಧರಿಸುತ್ತದೆ ಹೊರತು ಟ್ವಿಟ್ಟರ್ ಅಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಮೂಲಗಳ ಪ್ರಕಾರ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಟ್ವಿಟ್ಟರ್ ನ ಜಾಗತಿಕ ತಂಡಕ್ಕೆ ಬಲವಾದ ಆಕ್ಷೇಪ ಸೂಚಿಸಿ ಪತ್ರ ಬರೆದಿದೆ. ಆ ಪತ್ರದಲ್ಲಿ ಕೆಲವು ರಾಜಕೀಯ ನಾಯಕರು ಮಾಡಿದ ಟ್ವೀಟ್‌ಗಳಲ್ಲಿ 'ಮ್ಯಾನಿಪ್ಯುಲೇಟೆಡ್ ಮೀಡಿಯಾ' ಟ್ಯಾಗ್‌ಗೆ ತನ್ನ ಆಕ್ಷೇಪಣೆಯನ್ನು ಉಲ್ಲೇಖಿಸಿದೆ.
ಟೂಲ್‌ಕಿಟ್‌ನ ಸತ್ಯಾಸತ್ಯತೆಯನ್ನು ಪ್ರಶ್ನಿಸುವ ಸ್ಥಳೀಯ ಕಾನೂನು ಜಾರಿ ಸಂಸ್ಥೆಯ ಮುಂದೆ ಸಂಬಂಧಪಟ್ಟ ಪಕ್ಷಗಳಲ್ಲಿ ಒಬ್ಬರು ಈಗಾಗಲೇ ದೂರು ನೀಡಿದ್ದಾರೆ ಮತ್ತು ಅದೀಗ ತನಿಖೆ ಹಂತದಲ್ಲಿದೆ ಎಂದು ಟ್ವಿಟ್ಟರ್ ಗೆ ಬರೆದ ಪತ್ರದಲ್ಲಿ ಸಚಿವಾಲಯ ಹೇಳಿದೆ. ಸ್ಥಳೀಯ ಕಾನೂನು ಜಾರಿ ಸಂಸ್ಥೆ ತನಿಖೆಯನ್ನು ನಡೆಸುತ್ತಿರುವಾಗ ಟ್ವಿಟ್ಟರ್ ಈ ವಿಷಯದಲ್ಲಿ ಏಕಪಕ್ಷೀಯವಾಗಿ ತೀರ್ಮಾನಕ್ಕೆ ಬಂದಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಟ್ವಿಟ್ಟರ್ ನ ಇಂತಹ ಟ್ಯಾಗಿಂಗ್ ಪೂರ್ವಾಗ್ರಹ ಮತ್ತು ಸ್ಥಳೀಯ ಕಾನೂನು ಜಾರಿ ಸಂಸ್ಥೆಯ ತನಿಖೆಯನ್ನು ದಿಕ್ಕು ತಪ್ಪಿಸುವ ಉದ್ದೇಶಪೂರ್ವಕ ಪ್ರಯತ್ನವೆಂದು ತೋರುತ್ತದೆ ಎಂದು ಮೂಲಗಳು ತಿಳಿಸಿವೆ. ನ್ಯಾಯಯುತ ತನಿಖಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುವ ಪ್ರಯತ್ನ ಮತ್ತು ಸ್ಪಷ್ಟವಾದ ಅತಿಕ್ರಮಣ ಎಂದು ಟ್ವಿಟ್ಟರ್ ಇಂತಹ ಏಕಪಕ್ಷೀಯ ಕ್ರಮವನ್ನು ಸಚಿವಾಲಯ ಹೇಳಿದೆ, ಇದು ಸಂಪೂರ್ಣವಾಗಿ ಅನಗತ್ಯವಾಗಿದೆ. ಟ್ವಿಟರ್ ಏಕಪಕ್ಷೀಯವಾಗಿ ಮುಂದುವರಿಯಲು ಮತ್ತು ಕೆಲವು ಟ್ವೀಟ್‌ಗಳನ್ನು 'ಮ್ಯಾನಿಪ್ಯುಲೇಟೆಡ್' ಎಂದು ಹೆಸರಿಸಲು ಆಯ್ಕೆ ಮಾಡಿದೆ ಎಂದು ಸಚಿವಾಲಯ ತನ್ನ ಪತ್ರದಲ್ಲಿ ತಿಳಿಸಿದೆ,
ಇಂತಹ ಕ್ರಮವು ಬಳಕೆದಾರರ ಅಭಿಪ್ರಾಯ ವಿನಿಮಯಕ್ಕೆ ಅನುಕೂಲವಾಗುವ ತಟಸ್ಥ ಮತ್ತು ಪಕ್ಷಪಾತವಿಲ್ಲದ ವೇದಿಕೆಯಾಗಿ ಟ್ವಿಟ್ಟರ್ ನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಬಹುದು ಅಲ್ಲದೆ , ಟ್ವಿಟ್ಟರ್ ನ ಸ್ಥಿತಿ "ಮಧ್ಯವರ್ತಿ" ಯಾಗಿ ಪ್ರಶ್ನಾರ್ಥಕ ಚಿಹ್ನೆಯಾಗಲಿದೆ. ಮೋದಿ ಸರ್ಕಾರವನ್ನು ಗುರಿಯಾಗಿಸಲು ಕಾಂಗ್ರೆಸ್ ಸಿದ್ಧಪಡಿಸಿದ ಟೂಲ್ ಕಿಟ್ ಕುರಿತು ಬಿಜೆಪಿ ವಕ್ತಾರ ಸಂಬಿತ್ ಪತ್ರಾ ಅವರು ಟ್ವೀಟ್ ಮಾಡಿರುವ ಟ್ವಿಟ್ಟರ್ ಅನ್ನು 'ಮ್ಯಾನಿಪ್ಯುಲೇಟೆಡ್ ಮೀಡಿಯಾ' ಎಂದು ಟ್ವಿಟರ್ ಲೇಬಲ್ ಮಾಡಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.