ಕೊಚ್ಚಿ: ಕೇರಳ ವಿಧಾನ ಸಭೆಯ ಪ್ರತಿಪಕ್ಷ ನಾಯಕನಾಗಿ ವಿ.ಡಿ.ಸತೀಶನ್ ಅವರನ್ನು ಆಯ್ಕೆಗೊಳಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿ ವಿ.ಡಿ.ಸತೀಶನ್ ಅವರ ಹೆಸರನ್ನು ಹೈಕಮಾಂಡ್ ಸ್ವೀಕರಿಸಿದೆ ಎಂದು ವರದಿಯಾಗಿದೆ. ಇಂದು ಅಥವಾ ನಾಳೆ ಘೋಷಣೆ ಮಾಡಬಹುದೆಂದು ವರದಿಯಾಗಿದೆ.
ವರದಿಯೊಂದರ ಪ್ರಕಾರ, ಹೈಕಮಾಂಡ್ ವೀಕ್ಷಕರಾಗಿ ಆಗಮಿಸಿರುವ ಮಲ್ಲಿಕಾರ್ಜುನ ಖರ್ಗೆ ಮತ್ತು ವೈದ್ಯಲಿಂಗಂ ಅವರ ವರದಿಯು ವಿ.ಡಿ.ಸತೀಶನ್ ಪರವಾಗಿದೆ ಎನ್ನಲಾಗಿದೆ. 21 ಕಾಂಗ್ರೆಸ್ ಶಾಸಕರನ್ನು ಭೇಟಿಯಾಗಿ ಅವರ ವೈಯಕ್ತಿಕ ಅಭಿಪ್ರಾಯಗಳನ್ನು ಪಡೆದ ಬಳಿಕ ಹೈಕಮಾಂಡ್ ವೀಕ್ಷಕರು ಈ ವರದಿಯನ್ನು ಅಂತಿಮಗೊಳಿಸಲಿದ್ದಾರೆ.ಕಾಂಗ್ರೆಸ್ಸ್ ನ ಎರಡೂ ಗುಂಪುಗಳು ಚೆನ್ನಿತ್ತಲರನ್ನೇ ಮುಂದುವರಿಸಬೇಕೆಂದು ಒತ್ತಾಯಿಸಿವೆ. ಆದರೆ ಕೆ ಸುಧಾಕರನ್ ಅವರ ಬೆಂಬಲಿಗರು ಮತ್ತು ಯುವ ಶಾಸಕರು ಪ್ರತಿಪಕ್ಷದ ನಾಯಕನನ್ನು ಬದಲಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ವರದಿಯ ಪ್ರಕಾರ, ಕೇರಳದ ಬಹುಪಾಲು ಸಂಸದರು ವಿ.ಡಿ.ಸತೀಶನ್ ಪರವಾಗಿದ್ದಾರೆ.
ಕೆಲವು ನಾಯಕರು ರಮೇಶ್ ಚೆನ್ನಿತ್ತಲ ಅವರು ಪ್ರತಿಪಕ್ಷದ ನಾಯಕರಾಗಿ ಮುಂದುವರಿದರೆ ಕೇರಳದಲ್ಲಿ ಪಕ್ಷ ನೆಲಕ್ಕಚ್ಚಲಿದೆ ಎಂಬ ಆತಂಕದಲ್ಲಿದ್ದರೆ, ಎರಡನೇ ಬಾರಿಯ ಎಡರಂಗ ಸರ್ಕಾರದ ಬಹುತೇಕ ಶಾಸಕರೂ ಹೊಸಬರಾಗಿರುವುದು ಗಮನಾರ್ಹವಾಗಿದೆ.
ಏತನ್ಮಧ್ಯೆ, ಕೆ ಸುಧಾಕರನ್ ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪಿಟಿ ಥಾಮಸ್ ಯುಡಿಎಫ್ ಕನ್ವೀನರ್ ಆಗುವರೆಂದು ವರದಿಗಳಿವೆ.