ಮಂಜೇಶ್ವರ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಮೇ 3 ರಿಂದ ಮೇ 16 ರವರೆಗೆ ಎರಡು ವಾರಗಳ ಕಾಲ ಕಾಸರಗೋಡು ಜಿಲ್ಲೆಯ ಎಲ್ಲಾ ಪ್ರದೇಶಗಳಲ್ಲಿ ಕೋರೊನ ಸೋಂಕಿತರ ಚಿಕಿತ್ಸಾ ನಿಮಿತ್ತ ಉಚಿತ ಪ್ರಯಾಣಕ್ಕಾಗಿ ಎರಡು ವಾಹನಗಳನ್ನು ಮೀಸಲಿಟ್ಟು ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದ್ದು, ಬುಧವಾರ ಮಧ್ಯಾಹ್ನ ಕಾಸರಗೋಡು ಶ್ರೀ ವೆಂಕಟರಮಣ ದೇವಸ್ಥಾನ ಬಳಿ ಇರುವ ಜಿಲ್ಲಾ ಯೋಜನಾ ಕಚೇರಿಯ ಮುಂಭಾಗದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಎ.ಕೆ.ಎಂ ಅಶ್ರಫ್ ರವರು ಚಾಲಕರಿಗೆ ಕಿಟ್ ನೀಡುವ ಮೂಲಕ ವಾಹನಕ್ಕೆ ಚಾಲನೆ ನೀಡಿದರು.
ಈ ವೇಳೆ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ ಭಾಗ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಹರೀಶ್ ಶೆಟ್ಟಿ ಕಡಂಬಾರ್, ಸ್ಥಳೀಯ ಧಾರ್ಮಿಕ ಮುಖಂಡರಾದ ವೆಂಕಟ್ರಮಣ ಹೊಳ್ಳ ಉಪಸ್ಥಿತರಿದ್ದರು. ಯೋಜನಾಧಿಕಾರಿ ಮುಕೇಶ್ ಸ್ವಾಗತಿಸಿ, ಮೇಲ್ವಿಚಾರಕ ಅನಿಲ್ ಕುಮಾರ್ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ಕಾರ್ಯಕರ್ತರು ಭಾಗವಹಿಸಿದ್ದರು.