ತಿರುವನಂತಪುರ: ಕೊರೋನಾ ಮತ್ತು ಲಾಕ್‍ಡೌನ್ ನ ನಿರಂತರತೆಯನ್ನು ಗಮನದಲ್ಲಿಟ್ಟುಕೊಂಡು ಪಶುಸಂಗೋಪನಾ ಸಚಿವೆ ಜೆ.ಎಸ್. ಚಿಂಚುರಾಣಿ ನಿನ್ನೆ ತುರ್ತು ಸಭೆ ಕರೆದಿದ್ದರು. ರಾಜ್ಯದ ಮೂರು ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡೈರಿ ಕೋ-ಆಪರೇಟಿವ್ ಯೂನಿಯನ್‍ಗಳ ನೇತೃತ್ವದಲ್ಲಿ ಹಾಲು ಖರೀದಿಯನ್ನು ತೀವ್ರಗೊಳಿಸಲು ಸಚಿವರು ನಿರ್ದೇಶನ ನೀಡಿರುವರು.
ಹೆಚ್ಚುವರಿ ಹಾಲನ್ನು ಅಂಗನವಾಡಿಗಳು, ಡೊಮಿಸಿಲಿಯರಿ ಕೇರ್ ಸೆಂಟರ್, ಕೋವಿಡ್ ಮೊದಲ ಸಾಲಿನ ಚಿಕಿತ್ಸಾ ಕೇಂದ್ರಗಳು, ಅತಿಥಿ ಕಾರ್ಮಿಕ ಶಿಬಿರಗಳು ಮತ್ತು ಬುಡಕಟ್ಟು ವಸಾಹತುಗಳಲ್ಲಿ ವಿತರಿಸಲು ಯೋಜಿಸಲಾಗಿದೆ. ಪ್ರಸ್ತುತ ಬಿಕ್ಕಟ್ಟನ್ನು ನಿವಾರಿಸಲು ಹೆಚ್ಚಿನ ಹಾಲನ್ನು ದಾಸ್ತಾನು ಮಾಡಲು ಮತ್ತು ಲಭ್ಯವಿರುವ ಕಾರ್ಖಾನೆಗಳಿಗೆ ಕಳುಹಿಸಲು ಹಾಗೂ ಅದನ್ನು ಹಾಲಿನ ಪುಡಿಯಾಗಿ ಪರಿವರ್ತಿಸಲು ಯೋಜನೆಗಳು ಪ್ರಾರಂಭವಾಗಿವೆ.
ಪ್ರಸ್ತುತ ಶೇಕಡಾ 80 ರಷ್ಟು ಸಂಗ್ರಹಣೆ ಸಾಧ್ಯವಿದೆ. ಒಂದು ವಾರದ ಹಿಂದಿನವರೆಗೂ, ದಾಸ್ತಾನು ಮಾಡುವಿಕೆಯು ಕೇವಲ 60 ಪ್ರತಿಶತದಷ್ಟಿತ್ತು. ಸೋಮವಾರದ ವೇಳೆಗೆ ಖರೀದಿ ಶೇ 100 ಕ್ಕೆ ತಲುಪಲಿದೆ ಮತ್ತು ಪ್ರಸ್ತುತ ಬಿಕ್ಕಟ್ಟು ಬಗೆಹರಿಸಲಾಗುವುದು ಎಂದು ಸಚಿವರು ಹೇಳಿದರು. ಇಂತಹ ಪರಿಸ್ಥಿತಿಯನ್ನು ನಿವಾರಿಸಲು ದೀರ್ಘಾವಧಿಯ ಯೋಜನೆಗಳು ಅಗತ್ಯವಾಗಿದ್ದು, ಅದನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಕೊರೋನಾದ ಕಾರಣದಿಂದಾಗಿ ಅನೇಕ ರಾಜ್ಯಗಳಲ್ಲಿ ಲಾಕ್‍ಡೌನ್‍ಗಳನ್ನು ಘೋಷಿಸಿರುವ ಕಾರಣ ಹಾಲಿನ ಬಳಕೆ ಗಮನಾರ್ಹವಾಗಿ ಕುಸಿದಿದೆ. ಮಲಬಾರ್ ಪ್ರದೇಶದಲ್ಲಿ ಮಾತ್ರ ಪ್ರತಿದಿನ ನಾಲ್ಕು ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸಬೇಕಾಗಿತ್ತು. ಸಾಮಾನ್ಯವಾಗಿ ಈ ರೀತಿ ಸಂಗ್ರಹವಾಗುವ ಹೆಚ್ಚುವರಿ ಹಾಲನ್ನು ಸಾಮಾನ್ಯವಾಗಿ ನೆರೆಯ ರಾಜ್ಯಗಳಾದ ತಮಿಳುನಾಡು ಮತ್ತು ಕರ್ನಾಟಕಕ್ಕೆ ಪುಡಿಯಾಗಿ ಸಂಸ್ಕರಿಸಲು ಕಳುಹಿಸಲಾಗುತ್ತದೆ.
ಆದಾಗ್ಯೂ, ಕೊರೋನಾ ಬಿಕ್ಕಟ್ಟಿನಿಂದಾಗಿ, ಇತರ ರಾಜ್ಯಗಳಲ್ಲೂ ಹಾಲಿನ ಸಂಗ್ರಹಣೆ ಬಿಕ್ಕಟ್ಟು ಮತ್ತು ಸರಿಯಾದ ಸಮಯಕ್ಕೆ ವಿಲೇವಾರಿಯ ತೊಡಕಿನ ಕಾರಣ ಹೆಚ್ಚಿನ ಹಾಲು ಸಂಗ್ರಹಣೆ ಉಂಟಾಯಿತು. ಇದು ರಾಜ್ಯದಲ್ಲಿ ಹಾಲು ಖರೀದಿ ಬಿಕ್ಕಟ್ಟನ್ನುಂಟು ಮಾಡಿದೆ ಎಂದು ಸಭೆ ಅಂದಾಜಿಸಿದೆ.