ನವದೆಹಲಿ: ಮಂಗಳವಾರದಿಂದ ನೈಋತ್ಯ ಮಾರುತ ಪ್ರಬಲವಾಗುವುದರಿಂದ ಜೂನ್ 2 ಹಾಗೂ 3ರೊಳಗೆ ಮುಂಗಾರು ಕೇರಳ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜತೆಗೆ ಈ ವರ್ಷ ಒಂದರ ನಂತರ ಒಂದರಂತೆ ಯಾಸ್, ತೌಕ್ತೆ ಚಂಡಮಾರುತಗಳು ಕಾಣಿಸಿಕೊಂಡಿರುವ ಕಾರಣ ಬಿಸಿಗಾಳಿಯ ಪ್ರಭಾವವೂ ಇರುವುದಿಲ್ಲ. ಇದು ದೇಶದ ಜನರಿಗೆ ಬಿಸಿಗಾಳಿಯಿಂದ ತಪ್ಪಿಸಿಕೊಳ್ಳುವಂತೆ ಮಾಡಿದೆ ಎಂದು ಐಎಂಡಿ ಹಿರಿಯ ವಿಜ್ಞಾನಿ ಆರ್‌ಕೆ ಜೇನಮಣಿ ತಿಳಿಸಿದ್ದಾರೆ. ಮುಂದಿನ ಎರಡು ಮೂರು ದಿನ ದೆಹಲಿ- ಎನ್‌ಸಿಆರ್ ಪ್ರದೇಶದಲ್ಲಿ ಮಿಂಚುಗುಡುಗು ಸಹಿತ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ.
ಜೂನ್ 1ರಿಂದ ನೈಋತ್ಯ ಮಾರುತ ಬಲಗೊಳ್ಳಲಿವೆ. ಇದರ ಪ್ರಭಾವದಿಂದಸ ಕೇರಳದಲ್ಲಿ ಮಳೆ ಹೆಚ್ಚಾಗಲಿದೆ. ಜೂನ್ 3ರ ವೇಳೆಗೆ ಕೇರಳಕ್ಕೆ ಮುಂಗಾರು ಪ್ರವೇಶವಾಗಲಿದೆ ಎಂದು ತಿಳಿದುಬಂದಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಈ ವರ್ಷ ಹಲವು ಚಂಡಮಾರುತಗಳ ಪರಿಣಾಮ ಪ್ರತಿ ತಿಂಗಳು ಮಳೆಯಾಗಿದೆ. ಈ ಬಾರಿ ಮುಂಗಾರು ಸಹ ವಾಡಿಕೆಯಂತೆ ಇರಲಿದ್ದು, ನಿರೀಕ್ಷಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕೇರಳಕ್ಕೆ ಮುಂಗಾರು ಪ್ರವೇಶ ಮಾಡುತ್ತಿದ್ದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆ ಆರಂಭವಾಗುತ್ತದೆ. ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗುತ್ತದೆ ಎಂದು ತಿಳಿಸಿದೆ.