ತಿರುವನಂತಪುರ: ವಿಧಾನಸಭೆ ಚುನಾವಣಾ ಮತ ಎಣಿಕೆ ಮತ್ತು ಫಲಿತಾಂಶ ಘೋಷಣೆಯ ಹಿನ್ನೆಲೆಯಲ್ಲಿ ಕೇರಳ ಪೋಲೀಸರು ಮುಂದಿನ ಮೂರು ದಿನಗಳವರೆಗೆ ರಾಜ್ಯದಲ್ಲಿ ಕಟ್ಟುನಿಟ್ಟಿನ ನಿಬರ್ಂಧಗಳನ್ನು ಪ್ರಕಟಿಸಿದ್ದಾರೆ. ಮುಂದಿನ ಮಂಗಳವಾರದವರೆಗೆ ರಾಜ್ಯದಲ್ಲಿ ಜನರು ಒಟ್ಟುಗೂಡುವುದು ನಿರ್ಬಂಧಿಸಲಾಗಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪೋಲೀಸರು ಕ್ರಮಕ್ಕೆ ಮುಂದಾದರು.
ಪೋಲೀಸ್ ಕ್ರಮವನ್ನು ಜಿಲ್ಲಾ ಪೋಲೀಸ್ ಮುಖ್ಯಸ್ಥರು ಮತ್ತು ಕ್ಷೇತ್ರ ಅಧಿಕಾರಿಗಳು ನೇರವಾಗಿ ನಿರ್ದೇಶಿಸಲಿದ್ದಾರೆ. ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಡಿಜಿಪಿ ಲೋಕನಾಥ ಬೆಹ್ರಾ ಎಲ್ಲಾ ಜಿಲ್ಲಾ ಪೋಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಇಂದು ಕೂಟಗಳು ಮತ್ತು ವಿಜಯೋತ್ಸವಗಳನ್ನು ನಿರ್ಬಂಧಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೂಚಿಸಿದ್ದರು. ಈ ವಿಷಯವನ್ನು ಸರ್ವಪಕ್ಷ ಸಭೆಯಲ್ಲಿ ಮೊದಲೇ ನಿರ್ಧರಿಸಲಾಗಿತ್ತು. ಕೃತಜ್ಞತೆ ಸಲ್ಲಿಸಲು ಸಾಮಾಜಿಕ ಮಾಧ್ಯಮವನ್ನು ಬಳಸುವಂತೆ, ಅಭ್ಯರ್ಥಿಗಳು ಸಾರ್ವಜನಿಕ ಸ್ಥಳಗಳಿಗೆ ಹೋಗದಂತೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ.
ಜಿಲ್ಲಾ ಪೋಲೀಸ್ ಮುಖ್ಯಸ್ಥರು ಸಮಸ್ಯೆಗಳಿರುವ ಪ್ರದೇಶಗಳ ಬಗ್ಗೆ ವಿಶೇಷ ಗಮನ ಹರಿಸಲಿದ್ದಾರೆ. ಅಗತ್ಯವಿರುವಲ್ಲಿ ಪೋಲೀಸರ ಅರ್ಬನ್ ಕಮಾಂಡೋ ವಿಭಾಗವನ್ನೂ ನಿಯೋಜಿಸಲಾಗುವುದು. ಭಯೋತ್ಪಾದನಾ ನಿಗ್ರಹ ದಳಕ್ಕೆ ನಿರ್ದೇಶನ ನೀಡಲಾಗಿದೆ. ಪೋಲೀಸ್ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ ಮತ್ತು ಐಪಿಸಿ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಬೇಕು ಎಂದು ಡಿಜಿಪಿ ನಿರ್ದೇಶಿಸಿದ್ದಾರೆ. ಈ ವಿಷಯಗಳ ಬಗ್ಗೆ ಅಭ್ಯರ್ಥಿಗಳು ಮತ್ತು ಪಕ್ಷಗಳಿಗೆ ತಿಳಿಸಬೇಕು ಎಂದು ನಿರ್ದೇಶನ ನೀಡಿದೆ.
ಕೇರಳ ಸೇರಿದಂತೆ ಐದು ಸ್ಥಳಗಳಲ್ಲಿ ನಡೆಯುವ ಚುನಾವಣೆಯ ಫಲಿತಾಂಶ ಇಂದು ಬಿಡುಗಡೆಯಾಗಲಿದೆ. ಹೆಚ್ಚಿನ ಸಮೀಕ್ಷೆಗಳು ಕೇರಳದಲ್ಲಿ ಎಲ್ಡಿಎಫ್ ಆಡಳಿತವನ್ನು ಮುಂದುವರಿಸಲಿದೆ ಎಂದು ವಿಶ್ಲೇಶಿಸಿದೆ.