ಬದಿಯಡ್ಕ: ಸೇವೆಯೆಂಬ ಯಜ್ಞದಲ್ಲಿ ಸಮಿದೆಯಂತೆ ದುಡಿಯುವ ಸೇವಾಭಾರತಿಯ ಕಾರ್ಯಕರ್ತರ ತಂಡವೊಂದು ಬಡಕುಟುಂಬದ ಕಣ್ಣೀರೊರೆಸಲು ಟೊಂಕ ಕಟ್ಟಿನಿಂತಿದೆ. ಕೇರಳ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಅನೇಕ ದುರ್ಘಟನೆಗಳ ಸಂದರ್ಭದಲ್ಲಿ ಸೇವಾ ಭಾರತಿಯು ಜನಸೇವೆಯೇ ಜನಾರ್ದನ ಸೇವೆಯೆಂದು ಅನೇಕ ಜನರಿಗೆ ನೆರವಾಗಿದೆ.
ಬದಿಯಡ್ಕ ಗ್ರಾಮಪಂಚಾಯಿತಿ 13ನೇ ವಾರ್ಡು ಗೋಳಿಯಡ್ಕ. ಇಲ್ಲಿನ ಪರಿಶಿಷ್ಟ ಜಾತಿ ಕಾಲನಿಯಲ್ಲಿ ಉಳಕೊಳ್ಳಲು ಮನೆಯೇ ಇಲ್ಲದ ಕುಟುಂಬವೊಂದು ಕಳೆದ ಕೆಲವು ವರ್ಷಗಳಿಂದ ಊರಿನ ನೀರಾವರಿ ಸೌಲಭ್ಯಕ್ಕಾಗಿ ಸರ್ಕಾರವು ನಿರ್ಮಿಸಿದ ಟ್ಯಾಂಕಿಯ ಅಡಿಯಲ್ಲಿ ಜೀವನವನ್ನು ಸವೆಸುತ್ತಿದೆ. ಇತ್ತೀಚೆಗೆ ನಡೆದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಈ ಘಟನೆಯು ಬೆಳಕಿಗೆ ಬಂತು. ಇದನ್ನು ಮನಗಂಡು ಸೇವಾ ಭಾರತಿಯ ಕಾರ್ಯಕರ್ತರ ತಂಡವೊಂದು ಆ ಕುಟುಂಬಕ್ಕೆ ಮನೆಯನ್ನು ನಿರ್ಮಿಸಿ ಕೊಡಲು ಮುಂಚೂಣಿಯಲ್ಲಿ ನಿಂತಿರುವುದು ಗಮನಾರ್ಹವಾಗಿದೆ.
ಸುಂದರ ಮತ್ತು ಜಯಂತಿ ದಂಪತಿಗಳು ಕಳೆದ ಕೆಲವು ವರ್ಷಗಳಿಂದ ನೀರಿನ ಟ್ಯಾಂಕ್‍ನ್ನೇ ಆಶ್ರಯತಾಣವನ್ನಾಗಿಸಿಕೊಂಡಿದ್ದಾರೆ. 7 ವರ್ಷ ಪ್ರಾಯದ ಪುತ್ರಿ, 5 ವರ್ಷ ಪ್ರಾಯದ ವಿಕಲಚೇತನ ಪುತ್ರನೊಂದಿಗೆ ಕಷ್ಟಪಟ್ಟು ಜೀವನವನ್ನು ಸಾಗಿಸಬೇಕಾದ ಪರಿಸ್ಥಿತಿ ಅವರ ಮುಂದಿದೆ. ದಿನಗೂಲಿಯಲ್ಲಿ ಸಿಕ್ಕ ಹಣದಿಂದ ಹೇಗೋ ಬದುಕಿಕೊಂಡಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಇವರ ನರಕಸದೃಶ ಬದುಕು ಹೊರಜಗತ್ತಿಗೆ ಗೋಚರವಾಗಿದೆ. ಅಂಗವೈಕಲ್ಯದಿಂದ ಬಳಲುತ್ತಿರುವ ಮಗನೊಂದಿಗೆ ಕಷ್ಟ ಪಟ್ಟು ಜೀವಿಸುತ್ತಿರುವ ಇವರಿಗೆ ಮನೆಯೊಂದನ್ನು ನಿರ್ಮಿಸಿಕೊಡಲು ಸೇವಾ ಭಾರತಿ ಬದಿಯಡ್ಕ ಮತ್ತು ಅಭಯ ಸೇವಾ ನಿರತ ಸಂಘಟನೆಯ ಕಾರ್ಯಕರ್ತರು ಮುಂದೆಬಂದಿದ್ದು, ಸುಂದರರ 10 ಸೆಂಟ್ಸ್‍ಸ್ಥಳದಲ್ಲಿ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗಿದೆ. ಅಡಿಪಾಯದ ಕೆಲಸ ಪೂರ್ಣಗೊಂಡಿದ್ದು ಮನೆ ನಿರ್ಮಾಣಕ್ಕೆ ಸುಮಾರು 2.5 ಲಕ್ಷದಷ್ಟು ಅಂದಾಜು ವೆಚ್ಚ ತಗಲಲಿದೆ ಎನ್ನಲಾಗಿದೆ. ಪ್ರಸ್ತುತ ದೇಶಕ್ಕೇ ಬಂದೊದಗಿರುವ ಸಂಕಷ್ಟದ ಮಧ್ಯೆ, ಈ ಬಡಕುಟುಂಬಕ್ಕೆ ಸೂರನ್ನೊದಗಿಸುವ ಸತ್ಕಾರ್ಯಕ್ಕೆ ದಾನಿಗಳ ಸಹಕಾರ ಅಗತ್ಯವಿದೆ.
ಸಹಾಯಮಾಡಲಿಚ್ಚಿಸುವವರು ಜಯಂತಿ, ಖಾತೆ ಸಂಖ್ಯೆ : 40617101084382. ಐಎಫ್.ಸಿ ಸಂಖ್ಯೆ: ಕೆ.ಎಲ್.ಜಿ.ಬಿ.0040617. ಕೇರಳ ಗ್ರಾಮೀಣ ಬ್ಯಾಂಕ್ ಬದಿಯಡ್ಕ ಶಾಖೆಗೆ ಜಮೆ ಮಾಡಬಹುದು.