ನವದೆಹಲಿ: ಬಾಯಿ ಮುಕ್ಕಳಿಸಿದ ನೀರಿನಿಂದ ಕೋವಿಡ್ ಪರೀಕ್ಷೆ ನಡೆಸುವ ವಿಧಾನವನ್ನು ಜಾರಿಗೆ ತರಬೇಕು ಹಾಗೂ ಈ ವಿಧಾನವನ್ನು ಮೊದಲಿಗೆ ಸಂಶೋಧಿಸಿದ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ (ಏಮ್ಸ್) ಮತ್ತು ಟಿಎಚ್‌ಎಸ್‌ಟಿಐ ವಿಜ್ಞಾನಿಗಳಿಗೆ ಮಾನ್ಯತೆ ನೀಡಬೇಕು ಎಂದು ಏಮ್ಸ್ ನಿವಾಸಿ ವೈದ್ಯರ ಸಂಘ ಒತ್ತಾಯಿಸಿದೆ.
ಸಂಘವು ಈ ಸಂಬಂಧ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರಿಗೆ ಪತ್ರ ಬರೆದಿದೆ. ನಾಗಪುರ ಮೂಲದ 'ನೀರಿ' ಸಂಸ್ಥೆಯು ಉಪ್ಪುನೀರಿನಿಂದ ಬಾಯಿ ಮುಕ್ಕಳಿಸುವ ಮೂಲಕ ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡುವ ವಿಧಾನವನ್ನು ಅಭಿವೃದ್ಧಿಪಡಿಸಿದ್ದ ಬಗ್ಗೆ ಪ್ರಕಟಣೆ ನೀಡಿದ ಬೆನ್ನಲ್ಲೇ ಸಂಘವು ಈ ಪತ್ರ ಬರೆಯಲಾಗಿದೆ.
'ಬಾಯಿ ಮುಕ್ಕಳಿಸಿದ ನೀರನ್ನು ಕೋವಿಡ್ ಪರೀಕ್ಷೆಗೆ ಬಳಸುವುದು ಹೊಸ ತಂತ್ರಜ್ಞಾನವಲ್ಲ. ಏಮ್ಸ್ ಮತ್ತು ಫರೀದಾಬಾದ್‌ನ ಟ್ರಾನ್ಸ್‌ಲೇಷನಲ್ ಹೆಲ್ತ್ ಸೈನ್ಸ್ ಆಯಂಡ್ ಟೆಕ್ನಾಲಜಿ ಇನ್‌ಸ್ಟಿಟ್ಯುಟ್‌ನ (ಟಿಎಚ್‌ಎಸ್‌ಟಿಐ) ವಿಜ್ಞಾನಿಗಳು ಕಳೆದ ವರ್ಷವೇ ಗಂಟಲ ದ್ರವ ಪರೀಕ್ಷೆಯ ಬದಲಿಗೆ ಬಾಯಿ ಮುಕ್ಕಳಿಸಿದ ನೀರಿನ ಪರೀಕ್ಷೆ ನಡೆಸುವುದು ಉತ್ತಮ ಎಂದು ಹೇಳಿದ್ದರು ಹಾಗೂ ಸಂಶೋಧನಾ ಲೇಖನವೊಂದನ್ನೂ ಪ್ರಕಟಿಸಿದ್ದರು' ಎಂದು ಸಂಘದ ಅಧ್ಯಕ್ಷ ಅಮನ್‌ದೀಪ್ ಸಿಂಗ್ ಹೇಳಿದ್ದಾರೆ.
'ಸಿಐಎಸ್‌ಆರ್-ನೀರಿ ವಿಜ್ಞಾನಿಗಳ ಸಂಶೋಧನೆಯೂ ಅಭಿನಂದನಾರ್ಹ. ಇದರಿಂದ ತುಂಬ ಅಗ್ಗದ ದರದಲ್ಲಿ ಕೋವಿಡ್ ಪರೀಕ್ಷೆ ನಡೆಸುವುದು ಸಾಧ್ಯ. ಆದರೆ ಏಮ್ಸ್‌ನ ಯುವ ವೈದ್ಯರು ಮತ್ತು ವಿಜ್ಞಾನಿಗಳು ನಡೆಸಿದ ಸಂಶೋಧನೆಗೆ ಬೆಲೆ ದೊರೆಯದೆ ಹೋದುದು ಸರಿಯಲ್ಲ. ಇಂತಹ ಸಂಶೋಧನೆಗಳು ನಡೆದ ತಕ್ಷಣ ಅದನ್ನು ಅಳವಡಿಸಲು ಐಸಿಎಂಆರ್ ಮುಂದಾದರೆ ಅಪಾರ ಸಂಪನ್ಮೂಲ, ಹಣ ಮತ್ತು ಮಾನವ ಸಂಪನ್ಮೂಲವನ್ನು ಉಳಿಸಬಹುದಾಗಿದೆ ಎಂದು ಸಂಘ ಹೇಳಿದೆ.