ತಿರುವನಂತಪುರ: ಈ ಶೈಕ್ಷಣಿಕ ವರ್ಷವೂ ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳು ತೆರೆಯಲು ಸಾಧ್ಯವಾಗದ ಕಾರಣ ಶಾಲಾ ಪ್ರವೇಶೋತ್ಸವ ಜೂನ್ 1 ರಂದು ಕೈಟ್ ವಿಕ್ಟರ್ಸ್ ನಡೆಸುವ ವರ್ಚುವಲ್ ಕಾರ್ಯಕ್ರಮದ ಮೂಲಕ ನಡೆಸಲಾಗುವುದೆಂದು ಕೇರಳ ಶಿಕ್ಷಣ ಸಚಿವ ವಿ.ಶಿವಂಕುಟ್ಟಿ ಹೇಳಿದ್ದಾರೆ. ಕೈಟ್ ವಿಕ್ಟರ್ಸ್‍ನಲ್ಲಿ ನಡೆಯುವ ವರ್ಚುವಲ್ ಪ್ರವೇಶ ಸಮಾರಂಭದಲ್ಲಿ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರು ಭಾಗವಹಿಸಲಿದ್ದಾರೆ. ಮಕ್ಕಳ ಕಲಾ ಪ್ರದರ್ಶನಗಳು ಸಹ ಇರುತ್ತವೆ. ಬಳಿಕ ರಾಜ್ಯಮಟ್ಟದ ಉದ್ಘಾಟನೆ ಬೆಳಿಗ್ಗೆ 11 ಗಂಟೆಗೆ ತಿರುವನಂತಪುರದ ಕಾಟನ್ಹಿಲ್ ಶಾಲೆಯಲ್ಲಿ ನಡೆಯಲಿದೆ. ಮುಖ್ಯಮಂತ್ರಿಗಳು ವೈಯಕ್ತಿಕವಾಗಿ ಅಥವಾ ಆನ್‍ಲೈನ್‍ನಲ್ಲಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಕ್ಟರ್ಸ್ ಚಾನೆಲ್ ಮೂಲಕ ಪಾಠಗಳನ್ನು ಪ್ರಸಾರ ಮಾಡುವುದರ ಜೊತೆಗೆ, ಈ ವರ್ಷ ಆನ್‍ಲೈನ್ ತರಗತಿಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಇದರಿಂದ ಶಿಕ್ಷಕರು ಮತ್ತು ಮಕ್ಕಳು ನೇರಪ್ರಸಾರದ ಮೂಲಕ ಪರಸ್ಪರ ಸಂವಹನಕ್ಕೆ ಸಾಧ್ಯವಾಗುವುದು. ಕಳೆದ ವರ್ಷದ ಪಾಠವನ್ನು ಪುನರಾವರ್ತಿಸದೆ ಡಿಜಿಟಲ್ ತರಗತಿಗಳನ್ನು ತಿದ್ದುಪಡಿ ಮಾಡಲಾಗುತ್ತದೆ. ಆರಂಭದಲ್ಲಿ ಮಕ್ಕಳಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುವ ತರಗತಿಗಳು ಮತ್ತು ಹಿಂದಿನ ವರ್ಷದ ಪಾಠಗಳಿಗೆ ಸಂಬಂಧಿಸಿದಂತೆ ಸೇತುವೆ ತರಗತಿಗಳು ನಡೆಯಲಿವೆ.
ಮುಖ್ಯಮಂತ್ರಿಯವರ ಶಿಫಾರಸ್ಸಿನ ಮೇರೆಗೆ ಪ್ಲಸ್ ಒನ್ ಪರೀಕ್ಷೆಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳಲಾಗುವುದು. ಎಸ್‍ಎಸ್‍ಎಲ್‍ಸಿ ಐಟಿ ಪ್ರಾಯೋಗಿಕ ಪರೀಕ್ಷೆಯನ್ನು ಕೈಬಿಡಲಾಗಿದೆ. ಹೈಯರ್ ಸೆಕೆಂಡರಿ ಮತ್ತು ಪೊಕೇಶನಲ್ ಹೈಯರ್ ಸೆಕೆಂಡರಿ ಅಸೆಸ್ಮೆಂಟ್ ಜೂನ್ 1 ರಿಂದ ಪ್ರಾರಂಭವಾಗಿ ಜೂನ್ 19 ರಂದು ಕೊನೆಗೊಳ್ಳುತ್ತದೆ. ಎಎಸ್‍ಎಲ್‍ಸಿ ಮೌಲ್ಯಮಾಪನ ಜೂನ್ 7 ರಿಂದ 25 ರವರೆಗೆ ನಡೆಯಲಿದೆ. ಪ್ಲಸ್ ಟು ತರಗತಿಗಳು ಜೂನ್ ಎರಡನೇ ವಾರದಲ್ಲಿ ಪ್ರಾರಂಭವಾಗಲಿವೆ. 2020-21ರ ಬಾಕಿ ಇರುವ ಸಮವಸ್ತ್ರ ವಿತರಣೆ ಕೇಂದ್ರಗಳಿಗೆ ತಲುಪಿದೆ ಎಂದು ಶಿಕ್ಷಣ ಸಚಿವರು ಹೇಳಿರುವರು. 27 ಲಕ್ಷ ಮಕ್ಕಳಿಗೆ ಆಹಾರ ಕಿಟ್ ನೀಡಲಾಗುವುದು. 9 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಸಮವಸ್ತ್ರ ನೀಡಲಾಗುತ್ತಿದೆ. ಪಠ್ಯಪುಸ್ತಕಗಳ ಮೊದಲ ಸಂಪುಟದ 70 ಶೇ. ಶಾಲಾ ಸೊಸೈಟಿ ಮೂಲಕ ವಿತರಿಸಲಾಗಿದೆ ಎಂದು ಅವರು ಹೇಳಿದರು.