ನವದೆಹಲಿ: ಸಿಂಗಪುರದಲ್ಲಿ ಕಂಡುಬಂದಿರುವ ಕೊರೊನಾ ರೂಪಾಂತರ ಸೋಂಕಿನ ಪ್ರಕರಣಗಳನ್ನು ಪತ್ತೆ ಹಚ್ಚುತ್ತಿರುವುದಾಗಿ ಕೇಂದ್ರ ಸರ್ಕಾರದ ನೀತಿ ಆಯೋಗ ತಿಳಿಸಿದ್ದು, ಈ ರೂಪಾಂತರ ಸೋಂಕು ಮಕ್ಕಳ ಮೇಲೆ ಗಂಭೀರ ಪರಿಣಾಮ ಉಂಟು ಮಾಡುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದೆ.
ಸಿಂಗಪುರದಲ್ಲಿ ಪತ್ತೆಯಾಗಿರುವ ರೂಪಾಂತರ ಸೋಂಕು ಹಾಗೂ ಮಕ್ಕಳ ಮೇಲೆ ಅದರ ಪರಿಣಾಮದ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್, "ಸಿಂಗಪುರದಲ್ಲಿ ಪತ್ತೆಯಾಗಿರುವ ಆ ನಿರ್ದಿಷ್ಟ ರೂಪಾಂತರ ಸೋಂಕಿನ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ. ಆದರೆ ಮಕ್ಕಳ ಮೇಲೆ ಈ ಸೋಂಕು ಗಂಭೀರ ಪರಿಣಾಮ ಬೀರುವುದಿಲ್ಲ. ಹೀಗಾಗ್ಯೂ ಈ ಸೋಂಕಿನ ಮಾದರಿ ಮೇಲೆ ನಿಗಾ ವಹಿಸಲಾಗುವುದು" ಎಂದು ಹೇಳಿದರು.
ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಸಂಬಂಧ ಸರ್ಕಾರದ ಯೋಜನೆಗಳ ಕುರಿತು ಮಾತನಾಡಿದ ಅವರು, ಔಷಧ ನಿಯಂತ್ರಣ ಪ್ರಾಧಿಕಾರವು 2ರಿಂದ 18 ವರ್ಷದವರಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲು ಪ್ರಯೋಗಕ್ಕೆ ಅನುಮತಿ ನೀಡಿದೆ ಎಂದು ಘೋಷಿಸಿದರು. ಮುಂದಿನ 10-12 ದಿನಗಳಲ್ಲಿ ಪ್ರಯೋಗ ಆರಂಭವಾಗಲಿದೆ ಎಂದು ತಿಳಿಸಿದರು.
ದೆಹಲಿಯ ಏಮ್ಸ್, ಪಾಟ್ನಾದ ಏಮ್ಸ್ ಹಾಗೂ ನಾಗ್ಪುರದ ಮೆಡಿಟ್ರಿನಾ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಲ್ಲಿ 525 ಮಾದರಿ ಪ್ರಯೋಗಗಳನ್ನು ನಡೆಸುವುದಕ್ಕೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಮಂಗಳವಾರ ವಿಷಯ ತಜ್ಞರ ಸಮಿತಿಯು ಕೇಂದ್ರ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಕೊವ್ಯಾಕ್ಸಿನ್ ಲಸಿಕೆಯ ಪ್ರಯೋಗಕ್ಕೆ ಅನುಮೋದನೆ ನೀಡುವಂತೆ ಅರ್ಜಿ ಸಲ್ಲಿಸಿತ್ತು. ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ 2-18 ವರ್ಷದವರಿಗೆ ಸುರಕ್ಷಿತವೇ ಎಂಬ ಬಗ್ಗೆ ವಿಸ್ತೃತ ಚರ್ಚೆಯ ಬಳಿಕ ವೈದ್ಯಕೀಯ ಪ್ರಯೋಗಕ್ಕೆ ಷರತ್ತುಬದ್ಧ ಅನುಮೋದನೆ ನೀಡಲಾಗಿದೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಸಿಂಗಪುರದಲ್ಲಿ ಪತ್ತೆಯಾಗಿರುವ ಕೊರೊನಾ ರೂಪಾಂತರ ಸೋಂಕು ಭಾರತದಲ್ಲಿ ಮೂರನೇ ಅಲೆಗೆ ಕಾರಣವಾಗಿರಬಹುದು ಎಂದು ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದರು.