ನವದೆಹಲಿ: ಕೊರೋನಾವೈರಸ್ ಪ್ರಕರಣಗಳು ಒಂದೇ ಸಮನೆ ಏರಿಕೆಯಾಗುತ್ತಿದ್ದು, ಜೀವ ರಕ್ಷಕ ಅನಿಲಕ್ಕೆ ಬೇಡಿಕೆ ಹೆಚ್ಚಿರುವಂತೆಯೇ ಸಾರ್ವಜನಿಕ ಆರೋಗ್ಯದ ಅತ್ಯವಶ್ಯಕ ವಸ್ತುವನ್ನು ವ್ಯರ್ಥ ಮಾಡದೆ ವಿವೇಚನೆಯಿಂದ ಮೆಡಿಕಲ್ ಆಕ್ಸಿಜನ್ ಬಳಕೆಯಾಗುವಂತೆ ನೋಡಿಕೊಳ್ಳಬೇಕೆಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಕೇಂದ್ರ ಸರ್ಕಾರ ಹೇಳಿದೆ.
ದೇಶದಲ್ಲಿ ಆಕ್ಸಿಜನ್ ನ ಸಮರ್ಪಕ ದಾಸ್ತಾನಿದ್ದು, ಅದರ ಲಭ್ಯತೆ ಬಗ್ಗೆ ಸಾರ್ವಜನಿಕ ಆತಂಕಕ್ಕೆ ಒಳಗಾಗಬಾರದು ಎಂದು ಜನರಲ್ಲಿ ಮನವಿ ಮಾಡಿರುವ ಗೃಹ ವ್ಯವಹಾರಗಳ ಸಚಿವಾಲಯ ಹೆಚ್ಚುವರಿ ಕಾರ್ಯದರ್ಶಿ ಪಿಯೂಷ್ ಗೋಯಲ್ , ವಿವೇಚನೆಯಿಂದ ಆಕ್ಸಿಜನ್ ಬಳಕೆಯಾಗಬೇಕು, ಬಹಳಷ್ಟು ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಆಕ್ಸಿಜನ್ ಬೇಕಿಲ್ಲ ಎಂದು ಹೇಳಿದ್ದಾರೆ.
ಪರಿಸ್ಥಿತಿ ಗಂಭೀರವಾದಾಗ ಆಕ್ಸಿಜನ್ ಅಗತ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು, ಯಾವುದೇ ಹಂತದಲ್ಲಿ ಆಕ್ಸಿಜನ್ ವ್ಯರ್ಥವಾಗದಂತೆ ನೋಡಿಕೊಳ್ಳುವಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ದೇಶದಲ್ಲಿ ಸಮರ್ಪಕವಾದ ಆಕ್ಸಿಜನ್ ದಾಸ್ತಾನಿದೆ. ಆಕ್ಸಿಜನ್ ಉತ್ಪಾದನೆಯಾಗುವ ಪೂರ್ವ ರಾಜ್ಯಗಳಿಂದ ಹೆಚ್ಚಿನ ಬೇಡಿಕೆಯಿರುವ ಉತ್ತರ ಮತ್ತು ಸೆಂಟ್ರಲ್ ಇಂಡಿಯಾ ಭಾಗಕ್ಕೆ ಸಾಗಾಟದ ಸಮಸ್ಯೆಯನ್ನು ಬಗೆಹರಿಸಲಾಗುವುದು, ಆತಂಕಪಡಬೇಕಾಗಿಲ್ಲ.ವಾರದ ಎಲ್ಲಾ ವೇಳೆಯಲ್ಲೂ ಆಕ್ಸಿಜನ್ ಪೂರೈಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.
ದೇಶದಲ್ಲಿ ಆಕ್ಸಿಜನ್ ಉತ್ಪಾದನೆಯನ್ನು ಶೇ. 125 ರಷ್ಟು ಹೆಚ್ಚಿಸಲಾಗಿದೆ. ಲಿಕ್ವಿಡ್ ಆಕ್ಸಿಜನ್ ದೈನಂದಿನ ಉತ್ಪಾದನಾ ಸಾಮರ್ಥ್ಯ
ಪ್ರಸ್ತುತ 7,500 ಮೆಟ್ರಿಕ್ ಟನ್ ನಷ್ಟಿದೆ. ಸರ್ಕಾರ ಕೂಡಾ ವೈದ್ಯಕೀಯ ಆಕ್ಸಿಜನ್ ನ್ನು ಆಮದು ಮಾಡಿಕೊಳ್ಳುತ್ತಿದೆ.
ಶೇ .50 ರಷ್ಟು ಸಾರಜನಕ ಅನಿಲ ಸಾಗಿಸುವ ಟ್ಯಾಂಕರ್‌ಗಳನ್ನು ಆಮ್ಲಜನಕವನ್ನು ಒಯ್ಯುವಂತೆ ಪರಿವರ್ತಿಸಲು ಆದೇಶ ಹೊರಡಿಸಲಾಗಿದೆ ಎಂದು ಗೋಯಲ್ ತಿಳಿಸಿದರು.