ಕಾಸರಗೋಡು: ಕೋವಿಡ್ ಸಂಕಷ್ಟದ ನಡುವೆಯೂ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ(ನರೆಗಾ)ಯಲ್ಲಿ ಕಾಸರಗೋಡು ಜಿಲ್ಲೆ ದಾಖಲೆಯ ಸಾಧನೆ ನಡೆಸಿದೆ. ಯೋಜನೆಯ 2020-21 ವರ್ಷದಲ್ಲಿ 38 ಗ್ರಾಮ ಪಂಚಾಯಿತಿಗಳ 76498 ಕುಟುಂಬಗಳಿಗೆ 4755322 ಕೆಲಸದ ದಿನಗಳು ಪೂರ್ತಿಗೊಂಡಿವೆ. ಕುಟುಂಬವೊಂದಕ್ಕೆ ಸರಾಸರಿ 63 ನೌಕರಿ ದಿನಗಳು ಲಭ್ಯವಾಗಿದೆ. 23866 ಕುಟುಂಬಗಳಿಗೆ ನೂರು ದಿನಗಳ ನೌಕರಿ ಪೂರ್ಣಗೊಂಡಿದೆ. 10541 ಪರಿಶಿಷ್ಟ ಪಂಗಡ ಕುಟುಂಬಗಳಿಗೆ 915991 ನೌಕರಿ ದಿನಗಳು ಸೃಷ್ಟಿಯಾಗಿವೆ. ಈ ಹಿಂದಿನ ವರ್ಷಗಳಿಗಿಂತ 9400 ಕುಟುಂಬಗಳು ಹೊಸದಾಗಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸೇರ್ಪಡೆಗೊಂಡಿದೆ.
ಕೋವಿಡ್ ಮುಗ್ಗಟ್ಟಿನ ದಿನಗಳಲ್ಲೂ ಹೆಚ್ಚುವರಿ ನೌಕರಿ ದಿನಗಳನ್ನು ಸೃಷ್ಟಿಸಿ ಕೆಲಸ ನೀಡಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ 195 ಕೋಟಿ ರೂ.ನ ಕೆಲಸಕಾರ್ಯಗಳನ್ನು ನರೆಗಾ ಯೋಜನೆಯಲ್ಲಿ ಜಾರಿಗೊಳಿಸಲಾಗಿದೆ. ಇದರಲ್ಲಿ 142.56 ಕೋಟಿ ರೂ.ನ ಪರಿಣತವಲ್ಲದ ನೌಕರಿ ಕೂಲಿ ರೂಪದಲ್ಲಿ, 47.12 ಕೋಟಿ ರೂ. ಪರಿಣತ ನೌಕರಿ ಕೂಲಿ ಮತ್ತು 5.37 ಕೋಟಿ ರೂ. ಸಾಮಾಗ್ರಿ ರೂಪದಲ್ಲಿ ವೆಚ್ಚಮಾಡಲಾಗಿದೆ.
ಪರಪ್ಪ ಬ್ಲೋಕ್ ಪಂಚಾಯಿತಿ ಪ್ರಥಮ:
ಒಟ್ಟು 14.79 ಲಕ್ಷ ನೌಕರಿ ದಿನಗಳನ್ನು ಸೃಷ್ಟಿಸಿ 63.8 ಕೋಟಿ ರೂ. ವೆಚ್ಚಮಾಡಿರುವ ಪರಪ್ಪ ಬ್ಲೋಕ್ ಪಂಚಾಯಿತಿ ಕಾಸರಗೋಡು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. 9.26 ಲಕ್ಷ ನೌಕರಿ ದಿನಗಳನ್ನು ಸೃಷ್ಟಿಸಿರುವ ಕಾರಡ್ಕ ಬ್ಲೋಕ್ ಪಂಚಾಯಿತಿ ದ್ವಿತೀಯ ಸ್ಥಾನದಲ್ಲಿದೆ. ಗ್ರಾಮ ಪಂಚಾಯಿತಿಗಳಲ್ಲಿ ಮೂರು ಲಕ್ಷಕ್ಕೂ ಅಧಿಕ ನೌಕರಿ ದಿನಗಳನ್ನು ಸೃಷ್ಟಿಸಿರುವ ಕೋಡೋಂ- ಬೇಳೂರು ಗ್ರಾಮ ಪಂಚಾಯಿತಿ ಪ್ರಥಮ ಸ್ಥಾನ ಪಡೆದಿದೆ.
ಲೈಫ್ ಪಿ.ಎಂ.ಎ.ವೈ.(90 ದಿನಗಳ ಕೂಲಿ) ಜಿಯೋ ಟೆಕ್ಸ್ ಟೈಲ್ಸ್ ಬಳಸಿ ತೋಡು, ಹಳ್ಳಗಳ ದಡ ಸಂರಕ್ಷಣೆ , ಬಿದಿರು ಕೃಷಿ ಹೆಚ್ಚಳ, ಅರಣ್ಯೀಕರಣ, ಕುರುಚಲುಕಾಡು, ಹಸುರು ದ್ವೀಪ, ಹಿನ್ನೆಲೆ ಸೌಲಭ್ಯ ಅಭಿವೃದ್ಧಿ, ರಸ್ತೆ, ಕಾಲ್ನಡಿಗೆ ಹಾದಿ, ಅಂಗನವಾಡಿ ಕಟ್ಟಡ, ಮೈದಾನ, ಶಾಲೆಗಳ ಭೋಜನಾಲಯ, ಬಂಜರು ಜಾಗ ಅಭಿವೃದ್ಧಿ, ಕೃಷಿ ನೀರಾವರಿ ಸೌಲಭ್ಯ ಇತ್ಯಾದಿ ಕಾಮಗಾರಿ ಉದ್ಯೋಗ ಖಾತ್ರಿ ಯೋಜನೆ ಮೂಲಕ ಜಾರಿಗೊಳಿಸಲಾಗಿದೆ.
ಚಿತ್ರ ಮಾಹಿತಿ: ಬ್ಲಾಕ್ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಟುಂಬಶ್ರೀ ವತಿಯಿಂದ ನಿರ್ಮಿಸಿದ ಕೆರೆ ಹಾಗೂ ದಡಸಂರಕ್ಷಣೆ ನಿಟ್ಟಿನಲ್ಲಿ ಮಣ್ಣುಸವೆಯದಂತೆ ಹುರಿಹಗ್ಗ ಹೊದಿಕೆ.