ತಿರುವನಂತಪುರ: ಕೇರಳದಲ್ಲಿ ಕೋವಿಡ್ ಪಿಡುಗಿನ ನಿರ್ವಹಣೆ ಮೂಲಕ ಗಮನ ಸೆಳೆದಿದ್ದ ಕೆ.ಕೆ.ಶೈಲಜಾ ಅವರು ನಿಭಾಯಿಸಿದ್ದ ಆರೋಗ್ಯ ಖಾತೆಯ ಜವಾಬ್ದಾರಿಯನ್ನು ಮಾಜಿ ಪತ್ರಕರ್ತೆ ವೀಣಾ ಜಾರ್ಜ್ ಅವರಿಗೆ ನೀಡಲಾಗಿದೆ.
ಶಾಸಕಿಯಾಗಿ ಎರಡನೇ ಬಾರಿಗೆ ಆಯ್ಕೆಯಾಗಿರುವ ವೀಣಾ ಜಾರ್ಜ್, ಅರಣ್‌ಮುಲ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಈ ಉನ್ನತ ಹುದ್ದೆಗೇರಿದ ಮೊದಲ ಪತ್ರಕರ್ತೆ ಎಂಬ ಹೆಗ್ಗಳಿಕೆಗೂ ವೀಣಾ ಪಾತ್ರರಾಗಿದ್ದಾರೆ.
ನಾಯಕತ್ವ ಗುಣಗಳು, ಪ್ರಬುದ್ಧತೆಯಿಂದ ಕೂಡಿದ ಸಂವಾದ ಶಕ್ತಿಯಿಂದ ಗಮನ ಸೆಳೆದಿರುವ ವೀಣಾ ಉತ್ತಮ ವಾಗ್ಮಿಯೂ ಆಗಿದ್ದಾರೆ. ಸಂಪುಟದಲ್ಲಿ ಯಾರಿಗೆ ಸ್ಥಾನ ನೀಡಬೇಕು ಎಂಬ ಸಮಾಲೋಚನೆ ನಡೆದಿದ್ದ ಸಂದರ್ಭದಲ್ಲಿ, ಭಾರಿ ಸವಾಲಿನ ಆರೋಗ್ಯ ಖಾತೆಯನ್ನೇ ಇವರಿಗೆ ನೀಡಲಾಗುತ್ತದೆ ಎಂಬ ಚರ್ಚೆಗಳೂ ನಡೆದಿದ್ದವು.
ಶೈಲಜಾ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದೇ, ವೀಣಾ ಅವರಿಗೆ ಆರೋಗ್ಯ ಖಾತೆಯನ್ನು ನೀಡಿರುವುದು ಕೆಲವರಲ್ಲಿ ಅಸಮಾಧಾನಕ್ಕೂ ಕಾರಣವಾಗಿದೆ. ಶೈಲಜಾ ಅವರ ಕಾರ್ಯಕ್ಕೆ ಭೇಷ್ ಎಂದಿದ್ದ ಹಲವು ವಿದೇಶಿ ಮಾಧ್ಯಮಗಳು ಅವರನ್ನು 'ರಾಕ್‌ಸ್ಟಾರ್' ಎಂದೇ ಬಣ್ಣಿಸಿದ್ದವು. ಹೀಗಾಗಿ, ಈಗ ವೀಣಾ ಅವರ ಮೇಲೆ ನಿರೀಕ್ಷೆಯ ಭಾರವೂ ಹೆಚ್ಚಿದೆ.
ಶೈಲಜಾ ಅವರು ಕೋವಿಡ್-19 ಪಿಡುಗನ್ನು ಉತ್ತಮವಾಗಿ ನಿಭಾಯಿಸಿದ್ದರು. ಅವರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಸಮಾಜದ ವಿವಿಧ ಸ್ತರಗಳ ಜನರ ಜೊತೆಗೆ ಸೆಲೆಬ್ರಿಟಿಗಳು ಸಹ ಈ ಒತ್ತಾಯಕ್ಕೆ ದನಿಗೂಡಿಸಿದ್ದರು.
'ಕೋವಿಡ್-19 ವಿರುದ್ಧದ ಹೋರಾಟ ಸರ್ಕಾರದ ಸಾಂಘಿಕ ಪ್ರಯತ್ನವಾಗಿದೆ' ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವೀಣಾ ಜಾರ್ಜ್ ಅವರ ಸೇರ್ಪಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಟಿವಿ ಚಾನೆಲ್‌ವೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೀಣಾ, ಜನಪ್ರಿಯ ಕಾರ್ಯಕ್ರಮ 'ನಮ್ ಮುನ್ನೋಟ್ಟು' ನಡೆಸಿ ಕೊಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ವಿಜಯನ್ ಅವರು ಆಯ್ದ ಪ್ರೇಕ್ಷಕರೊಂದಿಗೆ ಸಂವಾದ ನಡೆಸುತ್ತಿದ್ದರು.
ಅವರು ಮನೋರಮಾ ನ್ಯೂಸ್ ಹಾಗೂ ರಿಪೋರ್ಟರ್ ಟಿವಿ ಸೇರಿದಂತೆ ಪ್ರಮುಖ ಚಾನೆಲ್‌ಗಳಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ. ಭೌತವಿಜ್ಞಾನದಲ್ಲಿ ಸ್ನಾತಕೋತ್ತರ, ಬಿ.ಇಡಿ ಪದವಿ ಪಡೆದಿರುವ ಅವರು, ಎಸ್‌ಎಫ್‌ಐ ಮೂಲಕ ತಮ್ಮ ಸಾಮಾಜಿಕ-ರಾಜಕೀಯ ಹೋರಾಟ ಆರಂಭಿಸಿದರು.
ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ಡಾ.ಜಾರ್ಜ್ ಜೋಸೆಫ್ ಅವರು ಪ್ರೌಢಶಾಲಾ ಶಿಕ್ಷಕ. ಅವರು ಮಲಂಕರ ಆರ್ಥೋಡಾಕ್ಸ್ ಸಿರಿಯನ್ ಚರ್ಚ್‌ನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.