HEALTH TIPS

ಕೋವಿಡ್‌ನಿಂದ ಅನಾಥರಾದ ಮಕ್ಕಳಿಗೆ ತಕ್ಷಣವೇ ಪರಿಹಾರ ಕಲ್ಪಿಸಿ: ಸುಪ್ರೀಂ ಸೂಚನೆ

              ನವದೆಹಲಿ: ಕೋವಿಡ್‌-19ರ ಸಾಂಕ್ರಾಮಿಕ ರೋಗದಿಂದ ಹೆತ್ತವರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಬಗ್ಗೆ ಗಮನ ಸೆಳೆದಿರುವ ಸುಪ್ರೀಂ ಕೋರ್ಟ್‌, ಈ ಮಕ್ಕಳಿಗೆ ತಕ್ಷಣವೇ ಪರಿಹಾರ ನೀಡಬೇಕು ಎಂದು ಶುಕ್ರವಾರ ರಾಜ್ಯಗಳಿಗೆ ಸೂಚನೆ ನೀಡಿದೆ.


         ನ್ಯಾಯಮೂರ್ತಿಗಳಾದ ಎಲ್‌.ಎನ್. ರಾವ್ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ರಜಾ ಪೀಠವು, ಸಾಂಕ್ರಾಮಿಕ ರೋಗದಿಂದ ಹೆತ್ತವರನ್ನು ಕಳೆದುಕೊಂಡ ಅನಾಥ ಮಕ್ಕಳನ್ನು ಗುರುತಿಸಿ, ಅವರ ಬಗೆಗಿನ ಸಮಗ್ರ ಮಾಹಿತಿಯನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್‌ಸಿಪಿಸಿಆರ್) 'ಬಾಲ್ ಸ್ವರಾಜ್' ವೆಬ್‌ಸೈಟ್‌ಗೆ ಶನಿವಾರ ಸಂಜೆಯೊಳಗೆ ಅಪ್‌ಲೋಡ್ ಮಾಡಬೇಕು ಎಂದು ಆಯಾ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿದೆ.

         'ಮಹಾರಾಷ್ಟ್ರದಲ್ಲಿ ಕೋವಿಡ್‌ನಿಂದಾಗಿ 2,900ಕ್ಕೂ ಹೆಚ್ಚು ಮಕ್ಕಳು ತಮ್ಮ ಒಬ್ಬ ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡಿದ್ದಾರೆ ಎಂದು ನಾವು ಓದಿದ್ದೇವೆ. ಈ ಸಾಂಕ್ರಾಮಿಕ ರೋಗದಿಂದ ದೇಶದಲ್ಲಿ ಎಷ್ಟು ಮಕ್ಕಳು ಅನಾಥರಾಗಿದ್ದಾರೆ ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಬೀದಿಗಳಲ್ಲಿ ಹಸಿವಿನಿಂದ ಬಳಲುತ್ತಿರುವ ಮಕ್ಕಳ ಸಂಕಟವನ್ನು ನೀವು ಅರ್ಥಮಾಡಿಕೊಂಡಿರುವಿರಿ ಎಂದು ಭಾವಿಸುತ್ತೇವೆ. ದಯವಿಟ್ಟು ಅವರ ಅಗತ್ಯಗಳನ್ನು ತಕ್ಷಣವೇ ಪೂರೈಸಲು ರಾಜ್ಯ ಸರ್ಕಾರಗಳಿಗೆ ತಿಳಿಸಿ' ಎಂದು ಸರ್ಕಾರದ ಪರ ವಕೀಲರಿಗೆ ನ್ಯಾಯಾಲಯ ಸೂಚಿಸಿತು.

           ಅನಾಥ ಮಕ್ಕಳನ್ನು ಗುರುತಿಸಿ, ಅವರಿಗೆ ರಾಜ್ಯ ಸರ್ಕಾರಗಳು ತಕ್ಷಣದ ಪರಿಹಾರವನ್ನು ನೀಡುವಂತೆ ಕೋರಿ ಅಮಿಕಸ್ ಕ್ಯೂರಿ ಗೌರವ್ ಅಗರ್‌ವಾಲ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ನಿರ್ದೇಶನ ನೀಡಿದೆ.

          'ಪೋಷಕರನ್ನು ಕಳೆದು ಮಕ್ಕಳು ಕಳ್ಳಸಾಗಾಣಿಕೆಗೆ ಒಳಗಾಗುವ ಸಾಧ್ಯತೆ ಇದೆ. ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳು ಕಳ್ಳಸಾಗಣೆಯಾದ ಹೆಚ್ಚಿನ ನಿದರ್ಶನಗಳಿರುವುದು ಆತಂಕದ ಸಂಗತಿ. ಕೋವಿಡ್‌ ಎರಡನೇ ಅಲೆಯಲ್ಲಿ ಸಾಂಕ್ರಾಮಿಕ ರೋಗದಿಂದ ಪ್ರತಿಕೂಲ ಎದುರಿಸುವ ಕುಟುಂಬಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ' ಎಂದು ಅರ್ಜಿಯಲ್ಲಿ ಗೌರವ್ ಅಗರ್‌ವಾಲ್ ಕಳವಳ ವ್ಯಕ್ತಪಡಿಸಿದ್ದರು.

         'ಮಕ್ಕಳನ್ನು ಹೊಂದಿರುವ ಅನೇಕ ಪೋಷಕರು ಕೋವಿಡ್‌ನಿಂದಾಗಿ ಉದ್ಯೋಗ ಕಳೆದುಕೊಂಡು ದುರ್ಬಲವಾಗಿದ್ದಾರೆ. ಬಾಲನ್ಯಾಯ ಕಾಯ್ದೆ -2015ರ ಅಡಿಯಲ್ಲಿ ಕಾರ್ಯ ನಿರ್ವಹಿಸುವವರು ಮತ್ತು ರಾಜ್ಯ ಸರ್ಕಾರಗಳು ಇಂಥ ದುರ್ಬಲ ಕುಟುಂಬಗಳನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು. ಪಡಿತರ, ಬಟ್ಟೆ, ಹಣಕಾಸಿನ ನೆರವು ಸೇರಿದಂತೆ ಇತರ ಅಗತ್ಯಗಳನ್ನು ಮನಗಂಡು ಸಹಾಯ ನೀಡಬೇಕು. ಸರ್ಕಾರದ ಯೋಜನೆಗಳ ಅಡಿಯಲ್ಲಿ ತಾತ್ಕಾಲಿಕ ಉದ್ಯೋಗವನ್ನು ಕಲ್ಪಿಸಿಕೊಡಲು ನೆರವಾಗಬೇಕು' ಎಂದೂ ಅವರು ಹೇಳಿದ್ದಾರೆ.

           'ಅನಾಥ ಅಥವಾ ನಿರ್ಗತಿಕ ಮಕ್ಕಳನ್ನು ನೋಡಿಕೊಳ್ಳಲು ಕೇಂದ್ರ ಸರ್ಕಾರವು ಈಗಾಗಲೇ ರಾಜ್ಯ ಸರ್ಕಾರಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ' ಎಂದು ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭತಿ ನ್ಯಾಯಾಲಯದ ಗಮನಕ್ಕೆ ತಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries