ಬೆಂಗಳೂರು: ಭಾರತದ ಅತಿದೊಡ್ಡ ಪುಸ್ತಕ ಮಳಿಗೆ ಎಂಬ ಖ್ಯಾತಿ ಗಳಿಸಿರುವ ಸಪ್ನಾ ಬುಕ್ ಹೌಸ್ ಸಂಸ್ಥಾಪಕ ಸುರೇಶ್ ಸಿ, ಶಾ ವಿಧಿವಶರಾಗಿದ್ದಾರೆ. 84 ವರ್ಷದ ಸುರೇಶ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಶೇಷಾದ್ರಿಪುರದ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮಂಗಳವಾರ ಮಧ್ಯಾಹ್ನ 2.15ರ ವೇಳೆಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ನಿತಿನ್, ದೀಪಕ್ ಮತ್ತು ಪರೇಶ್ ಎಂಬ ಮೂವರು ಪುತ್ರರನ್ನು ಸುರೇಶ್ ಶಾ ಅಗಲಿದ್ದಾರೆ. ಬುಧವಾರ ಬೆಳಗ್ಗೆ ಬೆಂಗಳೂರಿನ ಹರಿಶ್ಚಂದ್ರ ಘಾಟ್ ರುದ್ರಭೂಮಿಯಲ್ಲಿ ಮೃತರ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಸಪ್ನಾದ ಪ್ರಕಟಣೆ ತಿಳಿಸಿದೆ.
ಬೆಂಗಳೂರಿನಲ್ಲಿ ಮೊದಲ ಬಾರಿಗೆ 1966ರಲ್ಲಿ ಪುಟ್ಟದಾಗಿ ಸಪ್ನಾ ಬುಕ್ ಹೌಸ್ ಸುರೇಶ್ ಶಾ ಆರಂಭಿಸಿದ್ದರು. ಇಂದು ಅದೇ ಪುಟ್ಟ ಪುಸ್ತಕ ಮಳಿಗೆ ಭಾರತದ ಅತಿದೊಡ್ಡ ಪುಸ್ತಕ ಮಳಿಗೆ ಎಂದು ಹೆಸರಾಗಿದೆ. 19 ಶಾಖೆಗಳನ್ನು ಹೊಂದಿರುವ ಸಪ್ನಾ ಬುಕ್ ಹೌಸ್, ಕನ್ನಡ ಪುಸ್ತಕಗಳನ್ನು ವ್ಯಾಪಕವಾಗಿ ಓದುಗರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ.