ನವದೆಹಲಿ: ಬೇರೆ ಕೋವಿಡ್ ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡರೆ ಯಾವುದೇ ಗಮನಾರ್ಹ ಪರಿಣಾಮ ಆಗುವ ಸಾಧ್ಯತೆ ಇಲ್ಲ. ಆದರೆ, ಈ ದೃಢವಾದ ಅಭಿಪ್ರಾಯಕ್ಕೆ ಹೆಚ್ಚಿನ ಪರಿಶೀಲನೆ ಮತ್ತು ತಿಳುವಳಿಕೆ ಅಗತ್ಯವಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.
ಆದಾಗ್ಯೂ, ಅಸ್ತಿತ್ವದಲ್ಲಿರುವ ಪ್ರೋಟೋಕಾಲ್ ಪ್ರಕಾರ ಒಬ್ಬ ವ್ಯಕ್ತಿಗೆ ನೀಡಲಾಗುವ ಎರಡೂ ಡೋಸ್ ಗಳು ಒಂದೇ ಲಸಿಕೆಯಾಗಿರಬೇಕು ಎಂದು ಸ್ಪಷ್ಟಪಡಿಸಿದೆ. ಉತ್ತರ ಪ್ರದೇಶದ ಸಿದ್ದಾರ್ಥ ನಗರ ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತರು ಕೋವಿಶೀಲ್ಡ್ ಮೊದಲ ಡೋಸ್ ಪಡೆದಿದ್ದ 20 ಗ್ರಾಮಸ್ಥರಿಗೆ ಕೋವಾಕ್ಸಿನ್ ಎರಡನೇ ಡೋಸ್ ನೀಡಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ಕೇಂದ್ರ ಸರ್ಕಾರ ಈ ರೀತಿಯ ಸ್ಪಷ್ಟನೆ ನೀಡಿದೆ.
ಘಟನೆ ಬಗ್ಗೆ ತನಿಖೆ ಅಗತ್ಯವಿದೆ ಎಂದು ಹೇಳಿರುವ ನೀತಿ ಆಯೋಗದ ಸದಸ್ಯ (ಆರೋಗ್ಯ) ವಿಕೆ ಪೌಲ್, ಬೇರೆ ಕೋವಿಡ್ ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡರೆ ಯಾವುದೇ ಗಮನಾರ್ಹ ಪ್ರತಿಕೂಲ ಪರಿಣಾಮ ಸಾಧ್ಯತೆ ಇಲ್ಲ. ಎರಡು ವಿಭಿನ್ನ ಲಸಿಕೆಗಳ ಡೋಸ್ ತೆಗೆದುಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಬಹುದು. ಆದರೆ, ದೃಢ ನಿರ್ಧಾರಕ್ಕೆ ಹೆಚ್ಚಿನ ಪರಿಶೀಲನೆ ಮತ್ತು ತಿಳುವಳಿಕೆಯ ಅಗತ್ಯವಿದೆ ಎಂದರು.
ಉತ್ತರ ಪ್ರದೇಶ ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಒಂದು ವೇಳೆ ಅಂತಹ ಘಟನೆ ಸಂಭವಿಸಿದ್ದರೆ, ಇದು ವ್ಯಕ್ತಿಯ ಆತಂಕಕ್ಕೆ ಕಾರಣವಾಗಬಾರದು, ಆದರೆ ಅದೇ ಲಸಿಕೆಯ ಎರಡನೇ ಡೋಸ್ ನೀಡುವಂತೆ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಸೂಚಿಸಿದರು.