ಕಾಸರಗೋಡು: ವಾಡಿಕೆಗಿಂತ ಒಂದಷ್ಟು ಮೊದಲೇ ಮಾನ್ಸೂನ್ ಪ್ರಾರಂಭವಾಗುವುದರೊಂದಿಗೆ ಭತ್ತ, ತೆಂಗು, ಅಡಿಕೆ,ಬಾಳೆ ಮತ್ತು ರಬ್ಬರ್‍ನಂತಹ ಎಲ್ಲಾ ಕೃಷಿ ಬೆಳೆಗಳಿಗೆ ಗೊಬ್ಬರ ಹಾಕುವ ಸಮಯ ಸನ್ನಿಹಿತವಾಗುತ್ತಿದೆ. ರೈತರು ಈಗಾಗಲೇ ಭತ್ತದ ಮೊದಲ ಬೆಳೆಗೆ ಭೂಮಿಯನ್ನು ಸಿದ್ಧಪಡಿಸಲು ಪ್ರಾರಂಭಿಸಿದ್ದಾರೆ.
ಮಳೆಗಾಲದ ಟ್ಯಾಪಿಂಗ್ ಮೊದಲು ಪ್ಲಾಸ್ಟಿಕ್ ಹಾಕಲು ಬಯಸಿದರೆ, ಗಾಜು, ಚಿಪ್ಪುಗಳು ಮತ್ತು ಪ್ಲಾಸ್ಟಿಕ್ ನ್ನು ಮಾರಾಟ ಮಾಡುವ ಅಂಗಡಿಗಳು ಮತ್ತು ಕಿರಾಣಿ ಅಂಗಡಿಗಳು ತೆರೆದಿರಬೇಕಾಗುತ್ತದೆ. ಬಾಳೆ, ಅಡಿಕೆಗಳಿಗೂ ಗೊಬ್ಬರ, ಔಷಧಿ ಸಿಂಪಡಿಸಲು ಮೈಲುತುತ್ತು, ಸುಣ್ಣ ಬೇಕಾಗುತ್ತದೆ.
ಆದರೆ ಪ್ರಸ್ತುತ ಹಂತಹಂತವಾಗಿ ವಿಸ್ತರಣೆಗೊಳ್ಳುತ್ತಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೃಷಿಕರು ಅಗತ್ಯ ವಸ್ತುಗಳ ಲಭ್ಯತೆ ಇಲ್ಲದೆ ಕಂಗಾಲಾಗಿದ್ದಾರೆ. ಕೋವಿಡ್ ನಿಬಂಧನೆಗಳನ್ನು ಒಂದೊಂದಾಗಿ ಕಡಿತಮಾಡಲಾಗುತ್ತಿದ್ದು, ವ್ಯಾಪಾರಿಗಳ ಒತ್ತಾಸೆಗೆ ಮಣಿದು ಕೆಲವು ವಿಭಾಗಗಳ ಅಂಗಡಿಗಳನ್ನು ತೆರೆಯಲು ಸರ್ಕಾರ ಈಗಾಗಲೇ ನಿರ್ದೇಶನ ನೀಡಿದೆ. ಆದರೆ ಜನಜೀವನದ ಮೂಲ ಅಂಗವಾದ ಕೃಷಿ ಕ್ಷೇತ್ರದ ಪೂರಕ ಬೆಳವಣಿಗೆಗಳಿಗೆ ಅಗತ್ಯವಿರುವ ರಸಗೊಬ್ಬರ, ಕೃಷಿ ಯಂತ್ರೋಪಕÀರಣಗಳ ಅಂಗಡಿಗಳನ್ನು ತೆರೆಯಲು ಇನ್ನೂ ಸರ್ಕಾರ ಕ್ರಮ ಕೈಗೊಳ್ಳದಿರುವುದು ಕಟು ಟೀಕೆಗೆ ಕಾರಣವಾಗುತ್ತಿದ್ದು ಶೀಘ್ರ ಅಂಗಡಿಗಳನ್ನು ತೆರೆಯಲು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.