ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಜನರ ದಾರಿತಪ್ಪಿಸುತ್ತಿದೆ ಮತ್ತು "ಸುಳ್ಳು ಭೀತಿ" ಸೃಷ್ಟಿಸುತ್ತಿದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮಂಗಳವಾರ ಆರೋಪಿಸಿದ್ದಾರೆ.
ಕೊರೋನಾ ವೈರಸ್ ಬಿಕ್ಕಟ್ಟನ್ನು ನಿಭಾಯಿಸುವ ಬಗ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರವನ್ನು ಕಟುವಾಗಿ ಟೀಕಿಸಿದ ಮಾರನೇ ದಿನ ಜೆಪಿ ನಡ್ಡಾ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ನಾಲ್ಕು ಪುಟಗಳ ಪತ್ರ ಬರೆದಿದ್ದು, "ನಕಲಿ ಮತ್ತು ಕ್ಷುಲ್ಲಕತೆ"ಗಾಗಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರ ನಡವಳಿಕೆಯನ್ನು ಮುಂದೆ ನೆನಪಿಸಿಕೊಳ್ಳಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಶತಮಾನದ ಸಾಂಕ್ರಾಮಿಕ ಸಮಯದಲ್ಲಿ ಕಾಂಗ್ರೆಸ್ ನ ಮುಖ್ಯಮಂತ್ರಿಗಳು ಸೇರಿದಂತೆ ಹಲವು ನಾಯಕರು ಲಸಿಕೆಯ ಬಗ್ಗೆ ಜನರಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಅಧ್ಯಕ್ಷರು ದೂರಿದ್ದಾರೆ.
ಮೋದಿಯವರ ನೇತೃತ್ವದಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವು ವಿಜ್ಞಾನದಲ್ಲಿ ಅಚಲವಾದ ನಂಬಿಕೆ ಹೊಂದಿದ್ದು, ನಾವೀನ್ಯತೆಗೆ ಬೆಂಬಲ ನೀಡಿದೆ. ಕೋವಿಡ್ ಯೋಧರ ಮೇಲಿನ ನಂಬಿಕೆ ಮತ್ತು ಸಹಕಾರಿ ಫೆಡರಲಿಸಂನಿಂದ ಸರ್ಕಾರ ನಡೆಸಲ್ಪಡುತ್ತಿದೆ ಎಂದು ನಡ್ಡಾ ಹೇಳಿದ್ದಾರೆ.
ಇಂತಹ ಸವಾಲಿನ ಕಾಲದಲ್ಲೂ ಕಾಂಗ್ರೆಸ್ ನ ವರ್ತನೆಯಿಂದ ಬೇಸರವಾಗಿದೆ. ಆದರೆ ಅವರ ವರ್ತನೆ ಬಗ್ಗೆ ಆಶ್ಚರ್ಯವಿಲ್ಲ ಎಂದು ನಡ್ಡಾ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ನಮ್ಮ ಸುತ್ತಮುತ್ತಲಿನ ಸಾವು ನೋವುಗಳನ್ನು ಮರೆತು ತಮ್ಮ "ವೈಯಕ್ತಿಕ ಕಾರ್ಯಸೂಚಿಯನ್ನು" ಮುಂದುವರಿಸುವ ಬದಲು "ತಮ್ಮ ತಪ್ಪುಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು" ಮತ್ತು ಜನ ಸೇವೆಗೆ ಬದ್ಧರಾಗಬೇಕು ಎಂದು ಸಿಡಬ್ಲ್ಯೂಸಿ ಹೇಳಿತ್ತು.