ಕಾಸರಗೋಡು: ವಿಧಾನಸಭೆ ಚುನಾವಣೆ ಅಂಗವಾಗಿ ಮತಗಣನೆ ಕೇಂದ್ರಗಳಿಗೆ ಆಹಾರ ಪೂರೈಕೆ ನಡೆಸುವ ಮೂಲಕ ಕುಟುಂಬಶ್ರೀ ಈ ಬಾರಿ ಗಳಿಸಿದ್ದು 2,47,850 ರೂ. ಕರ್ತವ್ಯದಲ್ಲಿರುವ ಸಿಬ್ಬಂದಿಗಾಗಿ ಕುಡಿಯುವ ನೀರು, ಆಹಾರ ಇತ್ಯಾದಿ ಹೊಣೆಗಾರಿಕೆಯನ್ನು ಕುಟುಂಬಶ್ರೀ ವ್ಯವಸ್ಥಿತವಾಗಿ ಪೂರೈಸುವ ಮೂಲಕ ಶ್ಲಾಘನೆಗೆ ಪಾತ್ರ ವಾಗಿರುವುದರ ಜೊತೆಗೆ ಉತ್ತಮ ಆದಾಯವನ್ನೂ ಗಳಿಸಿಕೊಂಡಿದೆ.
ಕಾಸರಗೋಡು ಜಿಲ್ಲೆಯ ಮತ ಎಣಿಕೆ ಕೇಂದ್ರಗಳಾಗಿದ್ದ ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಕಾಸರಗೋಡು ಸರ್ಕಾರಿ ಕಾಲೇಜು, ಪೆರಿಯ ಪಾಲಿಟೆಕ್ನಿಕ್ ಕಾಲೇಜು, ತ್ರಿಕರಿಪುರ ಪಾಲಿಟೆಕ್ನಿಕ್ ಕಾಲೇಜು ಗಳಲ್ಲಿ ಕುಟುಂಬಶ್ರೀ ಹೊತ್ತುಹೊತ್ತಿನ ಆಹಾರ ಪೂರೈಕೆ ನಡೆಸಿತ್ತು. ಪ್ರತಿ ಕೇಂದ್ರಗಳಲ್ಲಿ ತಲಾ 5 ಮಂದಿ ಸದಸ್ಯರನ್ನು ಈ ನಿಟ್ಟಿನಲ್ಲಿ ನೇಮಕಗೊಳಿಸಲಾಗಿತ್ತು. ಚಹಾ, ಲಘು ಉಪಾಹಾರ, ಮಧ್ಯಾಹ್ನ ಭೋಜನ, ಬಿರಿಯಾನಿ ಇತ್ಯಾದಿಗಳ ಮೂಲಕ ಒಟ್ಟು 247850 ರೂ. ಗಳಿಕೆಯಾಗಿದೆ. ಈ ನಿಟ್ಟಿನಲ್ಲಿ ಕುಂಬಳೆಯ ಮತಎಣಿಕೆ ಕೇಂದ್ರದಲ್ಲಿ 49500 ರೂ., ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ 58600 ರೂ., ಪೆರಿಯದಲ್ಲಿ 68750 ರೂ., ತ್ರಿಕರಿಪುರದಲ್ಲಿ 71000 ರೂ. ಲಭಿಸಿದೆ. ಚುನಾವಣೆ ಸಂದರ್ಭದಲ್ಲೂ ಕುಟುಂಬಶ್ರೀ ವತಿಯಿಂದ ಆಹಾರ ಪೂರೈಕೆ ಮಾಡಲಾಗಿತ್ತು.