ಕಾಸರಗೋಡು: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‍ನಿಂದ ಬಿಜೆಪಿ ಕಾರ್ಯಕರ್ತರ ದಾರುಣ ಹತ್ಯೆ ನಡೆಯುವ ಮೂಲಕ ಮಾನವಹಕ್ಕಿನ ಉಲ್ಲಂಘನೆಯಾಗುತ್ತಿದ್ದರೂ, ಪ್ರಮುಖ ರಾಜಕೀಯ ಪಕ್ಷಗಳು ಜಾಣಕುರುಡು ನೀತಿ ಅನುಸರಿಸುತ್ತಿರುವುದಾಗಿ ಬಿಜೆಪಿ ರಾಜ್ಯ ಸಮಿತಿ ಅಧ್ಯಕ್ಷ ಕೆ. ಸುರೇಂದ್ರನ್ ತಿಳಿಸಿದ್ದಾರೆ.
ಅವರು ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‍ನ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಖಂಡಿಸಿ ಕೇರಳದ ಎಲ್ಲ ಜಿಲ್ಲೆಗಳಲ್ಲೂ ಬುಧವಾರ ಆಯೋಜಿಸಲಾಗಿದ್ದ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾಸರಗೋಡು ಬಿಜೆಪಿ ಕಚೇರಿ ವಠಾರದಲ್ಲಿ ನಡೆದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪಶ್ಚಿಮ ಬಂಗಾಳದಲ್ಲಿ ಕೊಲೆಗೀಡಾಗುತ್ತಿರುವುದು ಹಾಗೂ ದೌರ್ಜನ್ಯಕ್ಕೊಳಗಾಗುತ್ತಿರುವುದು ಬಿಜೆಪಿ ಕಾರ್ಯಕರ್ತರು ಹಾಗೂ ಅವರ ಕುಟುಂಬದವರಾಗಿರುವುದರಿಂದ ಕಮ್ಯೂನಿಸ್ಟ್ ಹಾಗೂ ಕಾಂಗ್ರೆಸ್ ಮೌನ ಪಾಲಿಸಿದೆ. ಮತೀಯ ಸಂಘಟನೆಗಳೊಂದಿಗೆ ಸೇರಿ ತೃಣಮೂಲ ಕಾಂಗ್ರೆಸ್ ಪ.ಬಂಗಾಳದಲ್ಲಿ ನಡೆಸುತ್ತಿರುವ ದೌರ್ಜನ್ಯ ಅತಿ ದೊಡ್ಡ ಮಾನವಹಕ್ಕಿನ ಉಲ್ಲಂಘನೆಯಾಗಿದೆ. ಕೇರಳದ ಬಿಜೆಪಿ ಕಾರ್ಯಕರ್ತರು ಬಂಗಾಳದ ಜನತೆಗಾಗಿ ಪೂರ್ಣ ಬೆಂಬಲ ನೀಡಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಯುವಮೋರ್ಚಾ ರಾಜ್ಯ ಸಮಿತಿ ಅಧ್ಯಕ್ಷ ಪ್ರಪುಲ್ ಕೃಷ್ಣನ್, ಬಿಜೆಪಿ ಮುಖಂಡರಾದ ವಕೀಲ ಸದಾನಂದ ರೈ, ಪಿ.ಆರ್ ಸುನಿಲ್, ಧನಂಜಯ ಮಧೂರು, ಸುಧಾಮ ಗೋಸಾಡ, ಎನ್.ಸತೀಶ್ ಉಪಸ್ಥಿತರಿದ್ದರು.