ನವದೆಹಲಿ: ಕೋವಿಡ್ ಲಸಿಕೆ ವಿತರಣೆಯ ದತ್ತಾಂಶ ಸಂಗ್ರಹಿವಲ್ಲಿ ಉಂಟಾಗುತ್ತಿದ್ದ ದೋಷ ನಿವಾರಣೆಗೆ ಕೇಂದ್ರ ಆರೋಗ್ಯ ಇಲಾಖೆ ಹೊಸ ಸೆಕ್ಯುರಿಟಿ ಕೋಡ್ ಮಾದರಿಯನ್ನು ಜಾರಿಗೆ ತಂದಿದ್ದು, ನಾಳೆ ಅಂದರೆ ಮೇ 8ರಿಂದಲೇ ಈ ನೂತನ ಸೇವೆ ಜಾರಿಯಾಗಲಿದೆ.
ಈ ಹಿಂದೆ ಕೋವಿನ್ ಪೋರ್ಟಲ್ ನಲ್ಲಿ ತಾವು ಲಸಿಕೆ ಪಡೆಯುವ ಮೊದಲೇ ಲಸಿಕಾ ಪ್ರಮಾಣಪತ್ರ ಲಭ್ಯವಾದ ಬಗ್ಗೆ ಹಲವು ಬಳಕೆದಾರರು ದೂರು ನೀಡಿದ್ದರು. ಹೀಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಆರೋಗ್ಯ ಇಲಾಖೆ ಕೋವಿನ್ ಪೋರ್ಟಲ್ ನಲ್ಲಿ ಬದಲಾಣೆಗೆ ಮುಂದಾಗಿತ್ತು. ಈಗ ಅದರಂತೆ ಹೊಸ ಹೊಸ ಸೆಕ್ಯುರಿಟಿ ಕೋಡ್ ಮಾದರಿಯನ್ನು ಜಾರಿಗೆ ತಂದಿದೆ. ಈ ನೂತನ ಸೆಕ್ಯುರಿಟಿ ಕೋಡ್ ಮಾದರಿಯಿಂದಾಗಿ ಬೇರೆ ವ್ಯಕ್ತಿಗೆ ಲಸಿಕೆ ವಿತರಣೆಯಾಗುವುದು ಕಡಿಮೆಯಾಗಲಿದೆ. ಯಾರು ಅಪಾಯಿಂಟ್‌ಮೆಂಟ್ ಪಡೆದಿರುತ್ತಾರೋ ಅಂಥಹವರಿಗೆ ಮಾತ್ರ ಸೂಕ್ತ ರೀತಿಯಲ್ಲಿ ಲಸಿಕೆ ಸಿಗಲಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೆಲವೊಂದು ಪ್ರಕರಣಗಳಲ್ಲಿ ಜನರು ಲಸಿಕೆ ಪಡೆಯಲು ಹೋಗದಿದ್ದರೂ ಅವರಿಗೆ ಲಸಿಕೆ ಪಡೆದ ಬಗ್ಗೆ ಸಂದೇಶ ಬಂದಿದೆ. ಕೋವಿನ್ ಪೋರ್ಟಲ್ ಮೂಲಕ ನಿಗದಿಪಡಿಸಿದ ದಿನಾಂಕದಂದು ಲಸಿಕೆ ಪಡೆಯಲಾಗದವರಿಗೂ, ಲಸಿಕೆ ಪಡೆದ ಬಗ್ಗೆ ಎಸ್‌ಎಂಎಸ್ ಬಂದಿದೆ. ಈ ದೋಷ ಸರಿಪಡಿಸಲು ಹೊಸ ಆಯ್ಕೆಯೊಂದನ್ನು ಕೋವಿನ್ ಪೋರ್ಟಲ್‌ನಲ್ಲಿ ನೀಡಲಾಗಿದೆ ಎಂದು ಹೇಳಿದೆ.
ಕೋವಿನ್ ಪೋರ್ಟಲ್ ನಲ್ಲಿ ಹೊಸ ಸೆಕ್ಯುರಿಟಿ ಸೌಲಭ್ಯ
ಈಗ ಕೋವಿನ್ ಪೋರ್ಟಲ್‌ನಲ್ಲಿ ಯಾರು ಲಸಿಕೆ ಪಡೆಯಲು ತಮ್ಮ ಹೆಸರನ್ನು ನೋಂದಣಿ ಮಾಡಲಿದ್ದಾರೆಯೋ ಹಾಗೂ ಲಸಿಕೆ ಪಡೆಯಲು ಸ್ಲಾಟ್ ಬುಕ್ ಮಾಡಿರುತ್ತಾರೆಯೋ ಅವರ ನೋಂದಾಯಿತ ಮೊಬೈಲ್ 4 ಅಂಕೆಗಳ ಒಂದು ಕೋಡ್ ಎಸ್‌ಎಂಎಸ್ ಮೂಲಕ ಲಭ್ಯವಾಗುತ್ತದೆ. ಅವರು ತಾವು ಲಸಿಕೆ ಪಡೆಯುವ ವೇಳೆಯಲ್ಲಿ ಈ 4 ಸಂಖ್ಯೆಯ ಸೆಕ್ಯುರಿಟಿ ಕೋಡ್‌ನ್ನು ಲಸಿಕಾ ಕೇಂದ್ರದಲ್ಲಿ ದಾಖಲಿಸಬೇಕಾಗಿದೆ. ಆ ಮೂಲಕ, ಲಸಿಕೆ ಪಡೆಯುತ್ತಿರುವುದು ತಾವೇ ಎಂದು ಖಾತರಿಪಡಿಸಿಕೊಳ್ಳಬಹುದಾಗಿದೆ.
ಬಳಸುವುದು ಹೇಗೆ?
ಶನಿವಾರದ ಬಳಿಕ, ಪೋರ್ಟಲ್‌ನಲ್ಲಿ ಈ ಹೊಸ ಆಯ್ಕೆ ಇರಲಿದೆ. ಅದರಂತೆ, ಲಸಿಕೆ ಪಡೆಯುವ ಸ್ಥಳದಲ್ಲಿ, ಲಸಿಕೆ ಪಡೆಯುವವರಿಗೆ 4 ಸಂಖ್ಯೆಯ ಸೆಕ್ಯುರಿಟಿ ಕೋಡ್‌ನ್ನು ನೀಡಲಾಗುತ್ತದೆ. ಆ 4 ಸಂಖ್ಯೆಯ ಸೆಕ್ಯುರಿಟಿ ಕೋಡ್ ಅನ್ನು ಲಸಿಕಾ ಕೇಂದ್ರದಲ್ಲಿ ನಾವು ನೀಡಬೇಕಾಗುತ್ತದೆ. ಬಳಿಕ, ಈ ಕೋಡ್‌ನ್ನು ಕೊವಿನ್ ಪೋರ್ಟಲ್‌ನಲ್ಲಿ ದಾಖಲಿಸಿ ಲಸಿಕೆ ಪಡೆದ ಬಗ್ಗೆ ಖಚಿತಪಡಿಸಿಕೊಳ್ಳಬಹುದಾಗಿದೆ. ಇದರಿಂದಾಗಿ ಬೇರೆಯದೇ ವ್ಯಕ್ತಿಗೆ ಲಸಿಕೆ ವಿತರಣೆಯಾಗುವುದು ಕಡಿಮೆಯಾಗಲಿದೆ. ಯಾರು ಅಪಾಯಿಂಟ್‌ಮೆಂಟ್ ಪಡೆದಿರುತ್ತಾರೋ ಅಂಥವರಿಗೆ ಸೂಕ್ತ ರೀತಿಯಲ್ಲಿ ಲಸಿಕೆ ಸಿಗಲಿದೆ.
ಹಲವು ಆಯಪ್ ಗಳಲ್ಲಿ ಈ ಸೆಕ್ಯುರಿಟಿ ಕೋಡ್ ಸೇವೆ ಈಗಾಗಲೇ ಚಾಲ್ತಿಯಲ್ಲಿದೆ
ಇನ್ನು ಪ್ರಸ್ತುತ ಕೋವಿನ್ ಪೋರ್ಟಲ್ ನಲ್ಲಿ ಬಳಸಲಾಗುತ್ತಿರುವ ಈ ಸೆಕ್ಯುರಿಟಿ ಕೋಡ್ ಸೇವೆಯನ್ನು ಈಗಾಗಲೇ ಹಲವು ಖಾಸಗಿ ಆಯಪ್ ಗಳು ಬಳಕೆ ಮಾಡುತ್ತಿವೆ. ಸೇವೆ ಸರಿಯಾದ ರೀತಿಯಲ್ಲಿ ಒದಗುವಂತೆ ಈ ಕ್ರಮ ರೂಪಿಸಲಾಗುತ್ತಿದೆ. ಪ್ರಮುಖವಾಗಿ ಓಲಾ ಅಥವಾ ಊಬರ್ ನಂತಹ ಸಾರಿಗೆ ಸೇವೆಗಳಲ್ಲಿ ನಾಲ್ಕು ಸಂಖ್ಯೆಯ ಪಾಸ್ ವರ್ಡ್‌ನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಈ ಪಾಸ್‌ವರ್ಡ್ ಟ್ಯಾಕ್ಸಿ ಡ್ರೈವರ್‌ಗೆ ತಿಳಿದಿರುವುದಿಲ್ಲ. ಚಾಲಕ ನಿಮ್ಮ ಬಳಿ ಬಂದಾಗ ನೀವು ಅವರಿಗೆ ಈ ನಾಲ್ಕು ಡಿಜಿಡ್ ಸಂಖ್ಯೆಯನ್ನು ತಿಳಿಸಬೇಕಾಗುತ್ತದೆ. ಆಗ ಬುಕ್ ಮಾಡಿದ ಗ್ರಾಹಕರಿಗೆ ಮಾತ್ರ ಸೇವೆ ಒದಗುತ್ತದೆ.
ಕೇವಲ ಸಾರಿಗೆ ಸೇವೆಯಲ್ಲಿ ಮಾತ್ರವಲ್ಲ ಬ್ಯಾಂಕಿಂಗ್ ಮತ್ತು ಇ-ಶಾಪಿಂಗ್ ಸೇವೆಗಳಲ್ಲೂ ಇಂತಹ ಒನ್ ಟೈಮ್ ಪಾಸ್ವರ್ಡ್ ಗಳ ಸೇವೆ ಚಾಲ್ತಿಯಲ್ಲಿದೆ. ಕೋವಿನ್ ಪೋರ್ಟಲ್ ಕೂಡ ಲಸಿಕೆ ವಿತರಣೆ ವಿಚಾರದಲ್ಲಿ ಹೀಗೆಯೇ ಕಾರ್ಯನಿರ್ವಹಿಸಲಿದೆ. ಸರಿಯಾದ ವ್ಯಕ್ತಿಗೆ ಲಸಿಕೆ ಲಭ್ಯವಾಗಿದೆ ಎಂದು ದೃಢೀಕರಿಸಲು ಈ ಮಾರ್ಗ ಬಳಕೆಯಾಗಲಿದೆ.