ತಿರುವನಂತಪುರ: ನಾಳೆಯಿಂದ(ಮೇ.08) ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಹೇರಲ್ಪಡುತ್ತಿದ್ದು, ಕೊರೋನಾ ಬಿಕ್ಕಟ್ಟಿನ ಎರಡನೇ ತರಂಗದ ಹಿನ್ನೆಲೆಯಲ್ಲಿ ಮೇ 16 ರವರೆಗೆ
ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮಾರ್ಗಸೂಚಿಗಳು ಮತ್ತು ವಿನಾಯಿತಿಗಳನ್ನು ಪ್ರಕಟಿಸುವ ಆದೇಶವನ್ನು ಹೊರಡಿಸಿದೆ. ಲಾಕ್‍ಡೌನ್ ದಿನಗಳಲ್ಲಿ ಬೆಳಿಗ್ಗೆ 6 ರಿಂದ ಸಂಜೆ 7.30 ರವರೆಗೆ ಅಂಗಡಿಗಳು ತೆರೆದಿರುತ್ತವೆ. ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಮಾತ್ರ ತೆರೆಯಲು ಅನುಮತಿಸಲಾಗಿದೆ. ಬೇಕರಿಗಳನ್ನು ಸಹ ತೆರೆಯಬಹುದು. ಆದರೆ ಮನೆ ವಿತರಣೆಗೆ ಮಾತ್ರ ಅವಕಾಶವಿದೆ.
ರಾಜ್ಯದ ಸರ್ಕಾರಿ ಕಚೇರಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗುವುದು. ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಕಾರ್ಯನಿರ್ವಹಿಸಬಹುದು. ಖಾಸಗಿ ಭದ್ರತಾ ಸೇವೆ ಕಾರ್ಯನಿರ್ವಹಿಸಬಹುದು. ಪೆಟ್ರೋಲ್ ಪಂಪ್‍ಗಳು ಮತ್ತು ಕಾರ್ಯಾಗಾರಗಳನ್ನು ತೆರೆಯಬಹುದು. ಸಣ್ಣ ನಿರ್ಮಾಣ ಕಾರ್ಯಗಳಿಗೆ ಅವಕಾಶ ನೀಡಲಾಗುವುದು. ಸಾರ್ವಜನಿಕ ಸಾರಿಗೆ ಸಂಪೂರ್ಣವಾಗಿ ಮೊಟಕುಗೊಳಿಸಲಾಗುವುದು. ಅನಗತ್ಯವಾಗಿ ಮನೆಯಿಂದ ಹೊರಗೆ ತೆರಳುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುವುದು. ಯಾವುದೇ ಜಿಲ್ಲೆಗಳಿಂದ ಮತ್ತೊಂದು ಜಿಲ್ಲೆಗೂ ಸಂಚಾರ ಅನುಮತಿ ಇರುವುದಿಲ್ಲ. ತುರ್ತು ತೆರಳಬೇಕಾದವರು ಅಗತ್ಯ ದಾಖಲೆಗಳೊಂದಿಗೆ ಅಫಿಡವಿಟ್ ಜೊತೆಯಲ್ಲಿರಿಸಿರಬೇಕು. ವಿಮಾನ ಮತ್ತು ರೈಲು ಸೇವೆಗಳು ಇರಲಿವೆ.
ಅಗತ್ಯ ಸೇವೆಗಳನ್ನು ಹೊಂದಿರುವ ಕಚೇರಿಗಳಿಗೆ ಮಾತ್ರ ಕಾರ್ಯನಿರ್ವಹಿಸಲು ಅವಕಾಶವಿದೆ. ಆಸ್ಪತ್ರೆಗೆ ಪ್ರಯಾಣ ಮತ್ತು ವ್ಯಾಕ್ಸಿನೇಷನ್ ಗೆ ತೆರಳಲು ಅಡ್ಡಿಯಿಲ್ಲ. ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದಿಂದ ಪ್ರಯಾಣಕ್ಕೆ ಯಾವುದೇ ತೊಂದರೆಯಿಲ್ಲ. ವಿವಾಹ ಸಮಾರಂಭಕ್ಕೆ(ಈಗಾಗಲೇ ನಿಗದಿಯಾಗಿರುವ) ಗರಿಷ್ಠ 30 ಜನರು ಮಾತ್ರ ಹಾಜರಾಗಬಹುದು, ಮತ್ತು ಅಂತ್ಯಕ್ರಿಯೆಯಲ್ಲಿ ಕೇವಲ 20 ಜನರು ಮಾತ್ರ ಭಾಗವಹಿಸಬಹುದು. ಆರಾಧನಾಲಯಗಳಿಗೆ ತೆರಳಲು ಅವಕಾಶವಿಲ್ಲ. ಪೂಜಾದಿಗಳು ಯಥಾ ರೀತಿ ನಡೆಯಲಿದೆ.
ಕೊರೋನಾ ಪ್ರಸರಣದಲ್ಲಿ ತೀವ್ರ ಏರಿಕೆಯ ಹಿನ್ನೆಲೆಯಲ್ಲಿ ಲಾಕ್‍ಡೌನ್ ವಿಧಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಸತತ ಎರಡನೇ ದಿನ ರಾಜ್ಯದಲ್ಲಿ ರೋಗಿಗಳ ಸಂಖ್ಯೆ ದಿನಕ್ಕೆ 40,000 ದಾಟಿದೆ.