ನವದೆಹಲಿ: ಕೋವಿಡ್ ಆಸ್ಪತ್ರೆಗಳಿಗೆ ದಾಖಲಾಗಲು ಪಾಸಿಟಿವ್ ವರದಿ ಕಡ್ಡಾಯವಲ್ಲ. ಕೊರೋನಾ ಲಕ್ಷಣಗಳು ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಕೊರೋನಾ ರೋಗಿಗಳು ಕೋವಿಡ್ ಕೇಂದ್ರಗಳಿಗೆ ದಾಖಲಾಗುವ ಸಂಬಂಧ ಇರುವ ರಾಷ್ಟ್ರೀಯ ನೀತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಪರಿಷ್ಕರಿಸಿದೆ. ಈ ಹೊಸ ನೀತಿಯ ಅನ್ವಯ ಕೋವಿಡ್ 19ಗೆ ಸಂಬಂಧಪಟ್ಟ ಯಾವುದೇ ಆರೋಗ್ಯ ಕೇಂದ್ರಗಳಿಗೆ ಪ್ರವೇಶ ಪಡೆಯಲು ಕೋವಿಡ್ ಪಾಸಿಟಿವ್ ವರದಿ ಕಡ್ಡಾಯವಲ್ಲ ಎಂದು ತಿಳಿಸಲಾಗಿದೆ.
ಈ ಮೊದಲು ಪಾಸಿಟಿವ್ ಬಂದ ನಂತರ ಸೋಂಕಿತರು ಕೋವಿಡ್ ಕೇರ್ ಸೆಂಟರ್(ಸಿಸಿಸಿ), ಡೆಡಿಕೇಟೆಡ್ ಕೋವಿಡ್ ಹೆಲ್ತ್ ಸೆಂಟರ್ಸ್(ಡಿಸಿಎಚ್‌ಸಿ) ಮತ್ತು ಡೆಡಿಕೇಟೆಡ್ ಕೋವಿಡ್ ಹಾಸ್ಪಿಟಲ್ಸ್(ಡಿಸಿಎಚ್)ಗೆ ಸೇರ್ಪಡೆಯಾಗಿ ಚಿಕಿತ್ಸೆ ಪಡೆಯಬೇಕಿತ್ತು. ಆದರೆ ಇದಗೀ ಪರಿಷ್ಕರಣೆಗೊಂಡ ನೀತಿಯ ಅನ್ವಯ, ಕೋವಿಡ್ ಲಕ್ಷಣಗಳು ಕಂಡುಬಂದರೆ ಸಾಕು ಈ ಮೂರರಲ್ಲಿ ಯಾವುದೇ ಕೇಂದ್ರಗಳಿಗೆ ಹೋಗಿ ಚಿಕಿತ್ಸೆ ಪಡೆಯಬಹುದಾಗಿದೆ.
ಸ್ಥಳೀಯರಿಗೆ ಮಾತ್ರ ಚಿಕಿತ್ಸೆ ಕೊಡುತ್ತೇವೆ. ಬೇರೆ ನಗರ, ಜಿಲ್ಲೆಗಳವರಿಗೆ ಚಿಕಿತ್ಸೆ ಕೊಡುವುದಿಲ್ಲ ಎಂದು ಹೇಳುವಂತಿಲ್ಲ. ಇಷ್ಟು ದಿನ ಆಯಾ ಕೇಂದ್ರಗಳಿಗೆ ನಿಗದಿ ಮಾಡಿದ್ದ ವ್ಯಾಪ್ತಿ ಇನ್ನು ಮುಂದೆ ಅನ್ವಯವಾಗುವುದಿಲ್ಲ ಎಂದು ಪರಿಷ್ಕರಣ ರಾಷ್ಟ್ರೀಯ ನೀತಿಯಲ್ಲಿ ಉಲ್ಲೇಖವಾಗಿದೆ.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 4,01,078 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ. ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಈಗ 2,18,92,676ಕ್ಕೆ ಏರಿದೆ.
ಭಾರತವು ಕಳೆದ 24 ಗಂಟೆಗಳಲ್ಲಿ 3,18,609 ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಚೇತರಿಕೆ ಪ್ರಮಾಣ 1,79,30,960ಕ್ಕೆ ತಲುಪಿದೆ.
ಕಳೆದ 24 ಗಂಟೆಗಳಲ್ಲಿ 4,187 ಮಂದಿ ಮೃತಪಟ್ಟಿದ್ದು ಈ ಮೂಲಕ ದೇಶದಲ್ಲಿ ಸಾವಿನ ಸಂಖ್ಯೆ 2,38,270ಕ್ಕೆ ತಲುಪಿದೆ. ಪ್ರಸ್ತುತ, ಭಾರತದಲ್ಲಿ 37,23,446 ಸಕ್ರಿಯ ಕೊರೊನಾವೈರಸ್ ಪ್ರಕರಣಗಳಿವೆ.