ನವದೆಹಲಿ: ಕೋವಿಡ್-19ಗೆ ಚಿಕಿತ್ಸೆ ನೀಡಲು 'ಝಆರ್‌ಸಿ-3308' ಔಷಧಿಯ ಮಾನವ ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿ ನೀಡುವಂತೆ ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯಕ್ಕೆ (ಡಿಜಿಸಿಐ) ಝೈಡಸ್ ಕ್ಯಾಡಿಲಾ ಕೋರಿಕೆ ಸಲ್ಲಿಸಿದೆ.
'ಝಆರ್‌ಸಿ-3308' ಸುರಕ್ಷಿತವಾಗಿದೆ ಎಂದು ಝೈಡಸ್ ಕ್ಯಾಡಿಲಾದ 'ಕ್ಯಾಡಿಲಾ ಹೆಲ್ತ್‌ಕೇರ್' ತಿಳಿಸಿದೆ.
ಕೋವಿಡ್-19ಗೆ ಚಿಕಿತ್ಸೆ ನೀಡಲು ಈ ರೀತಿಯ ಔಷಧ ಅಭಿವೃದ್ಧಿಪಡಿಸಿರುವ ಭಾರತದ ಮೊದಲ ಕಂಪನಿಯಾಗಿದೆ ಎಂದು ಅದು ತಿಳಿಸಿದೆ. ಕ್ಯಾಡಿಲಾ ಹೆಲ್ತ್‌ಕೇರ್ ಕಂಪನಿಯು ಝೈಡಸ್ ಕ್ಯಾಡಿಲಾ ಸಮೂಹದ ಭಾಗವಾಗಿದೆ.
ಪ್ರಾಣಿಗಳ ಮೇಲೆ ಪ್ರಯೋಗ ನಡೆಸಿದ ಸಂದರ್ಭದಲ್ಲಿ ಶ್ವಾಸಕೋಶಕ್ಕೆ ಹಾನಿಯಾಗುವುದನ್ನು ಕಡಿಮೆ ಮಾಡುವುದನ್ನು ತೋರಿಸಲಾಗಿತ್ತು. ಈಗ ಸುರಕ್ಷಿತ ಎನ್ನುವುದು ಸಾಬೀತಾಗಿದೆ ಎಂದು ಕಂಪನಿ ತಿಳಿಸಿದೆ.
'ಕೋವಿಡ್ ನಿಯಂತ್ರಿಸಲು ಸುರಕ್ಷಿತವಾದ ಮತ್ತು ಪರಿಣಾಮಕಾರಿ ಚಿಕಿತ್ಸೆ ಈ ಸಂದರ್ಭದಲ್ಲಿ ಅಗತ್ಯವಿದೆ. ಕಾಯಿಲೆಯ ವಿವಿಧ ಹಂತಗಳನ್ನು ಪರಿಶೀಲಿಸಬೇಕು ಮತ್ತು ರೋಗಿಗಳು ಅನುಭವಿಸುವ ನೋವು ಕಡಿಮೆ ಮಾಡುವ ಬಗ್ಗೆ ಯೋಚಿಸಬೇಕು. ಈ ವಿಷಯಗಳನ್ನು ವಿಶ್ಲೇಷಿಸಿದಾಗ ಝಆರ್‌ಸಿ-3308 ಪರಿಣಾಮಕಾರಿಯಾಗಲಿದೆ ಎನ್ನುವ ವಿಶ್ವಾಸವಿದೆ' ಎಂದು ಕ್ಯಾಡಿಲಾ ಹೆಲ್ತ್‌ಕೇರ್‌ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಶರ್ವಿಲ್ ಪಟೇಲ್ ತಿಳಿಸಿದ್ದಾರೆ.