ನವದೆಹಲಿ : ಭಾರತದಲ್ಲಿ ವಿಪರೀತವಾಗಿರುವ ಕೋವಿಡ್ ಸೋಂಕಿನ ಪರಿಸ್ಥಿತಿಯಲ್ಲಿ ಒಮ್ಮೆ ಸೋಂಕು ತಗುಲಿ ಗುಣಮುಖರಾಗಿರುವವರಿಗೂ ಮತ್ತೆ ಸೋಂಕು ತಗುಲುತ್ತಿರುವುದು ಕಂಡುಬಂದಿದೆ. ಹೀಗಾಗಿ ಕೊರೊನಾ ಮುನ್ನೆಚ್ಚರಿಕೆಗಳಲ್ಲಿ ಪ್ರಮುಖವಾದ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ನೀಡಬೇಕು. ಈ ಪರಿಸ್ಥಿತಿಯಲ್ಲಿ ಓರಲ್ ಹೈಜೀನ್ ಅಥವಾ ಬಾಯಿಯ ಸ್ವಚ್ಛತೆ ಬಹಳ ಮುಖ್ಯ ಎಂದಿದ್ದಾರೆ ತಜ್ಞರು.
ಮುಖ್ಯವಾಗಿ, ಕೊರೊನಾ ರೋಗಿಗಳು ಗುಣಮುಖರಾದ ನಂತರ, ವೈರಸ್ ಮತ್ತಷ್ಟು ಹರಡದಂತೆ ತಡೆಗಟ್ಟಲು ತಮ್ಮ ಟೂತ್ ಬ್ರಶ್ ಮತ್ತು ಟಂಗ್ ಕ್ಲೀನರ್ ಗಳನ್ನು ಬದಲಾಯಿಸಬೇಕು ಎಂದು ದಂತವೈದ್ಯರು ಶಿಫಾರಸು ಮಾಡಿದ್ದಾರೆ. ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿ ಬ್ರಶ್ ಬದಲಿಸುವುದರಿಂದ ಮತ್ತೆ ತನಗೇ ಸೋಂಕು ತಗುಲದಂತೆ ಮತ್ತು ಅವನೊಂದಿಗೆ ಬಾತ್ ರೂಮನ್ನು ಬಳಸುವ ಮನೆಯ ಇತರ ಸದಸ್ಯರಿಗೆ ಸೋಂಕು ತಗುಲದಂತೆ ಎಚ್ಚರ ವಹಿಸಬಹುದಾಗಿದೆ ಎಂದಿದ್ದಾರೆ.
'ಸೋಂಕಿತರು ಬಳಸುವ ಟೂತ್ ಬ್ರಶ್ ನಲ್ಲಿ ವೈರಸ್ ಹೇರಳವಾಗಿ ಶೇಖರಣೆಯಾಗಿರುತ್ತವೆ. ಆದ್ದರಿಂದ ಸೋಂಕು ನಿವಾರಣೆಯಾದ ತಕ್ಷಣ ಹಳೆಯದನ್ನು ಎಸೆದು, ಹೊಸ ಬ್ರಶ್ ಬಳಸುವುದು ಅತ್ಯವಶ್ಯಕ' ಎಂದು ನವದೆಹಲಿಯ ಲೇಡಿ ಹಾಡಿರ್ಂಗ್ ವೈದ್ಯಕೀಯ ಕಾಲೇಜಿನ ಡೆಂಟಲ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಪ್ರವೀಶ್ ಮೆಹ್ರಾ, ಹೇಳಿದ್ದಾರೆ. ಇದೇ ಕಾರಣಕ್ಕೆ ಮನೆಯಲ್ಲಿ ಯಾರಿಗಾದರೂ ಕೊರೊನಾ ಸೋಂಕು ತಗುಲಿದ್ದರೆ, ಅಂತಹ ಸೋಂಕಿತರ ಟೂತ್ ಬ್ರಶ್, ಟಂಗ್ ಕ್ಲೀನರ್ ಮತ್ತಿತರ ವಸ್ತುಗಳೊಂದಿಗೆ ಮನೆಯ ಇತರ ಸದಸ್ಯರು ತಮ್ಮ ವಸ್ತುಗಳನ್ನು ಇಡದಿರುವುದೂ ಅತ್ಯವಶ್ಯಕ ಎಂದಿದ್ದಾರೆ.
'ಯಾವುದೇ ಫ್ಲೂ ಅಥವಾ ಕೆಮ್ಮು ನೆಗಡಿಯಿಂದ ಗುಣಮುಖರಾದ ಮೇಲೆ ಬ್ರಶ್ ಬದಲಿಸಲು ನಾನು ಸಲಹೆ ನೀಡುತ್ತೇನೆ. ಇನ್ನು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರಿಗೆ ಇದು ಹೆಚ್ಚು ಅನ್ವಯವಾಗುತ್ತದೆ. ಮೊದಲ ಗುಣಲಕ್ಷಣಗಳು ಕಾಣಿಸಿಕೊಂಡ ದಿನದಿಂದ 20 ದಿನಗಳ ನಂತರ ಬ್ರಶ್ ಬದಲಾಯಿಸಬೇಕು' ಎಂದು ಆಕಾಶ್ ಹೆಲ್ತ್‍ಕೇರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ದಂತವೈದ್ಯೆಯಾದ ಡಾ. ಭೂಮಿಕಾ ಮದನ್ ಹೇಳಿದ್ದಾರೆ.
ಅನ್ಯಥಾ ಕೂಡ ಪ್ರತಿ ಮೂರು ತಿಂಗಳಿಗೊಮ್ಮೆ ಟೂತ್ ಬ್ರಶ್ ಬದಲಿಸಬೇಕು ಎಂದು ಎಲ್ಲಾ ದಂತವೈದ್ಯರು ಸಲಹೆ ನೀಡುತ್ತಾರೆ. 'ಟೂತ್ ಬ್ರಶ್ ಗಳ ಮೇಲೆ ಶೇಖರಣೆಯಾಗುವ ಬ್ಯಾಕ್ಟೀರಿಯಾ ಅಥವಾ ವೈರಸ್ ನಿಂದ ಶ್ವಾಸನಾಳದ ಮೇಲ್ಭಾಗಕ್ಕೆ ಸೋಂಕುಗಳು ತಗುಲುವ ಸಾಧ್ಯತೆ ಇರುತ್ತದೆ' ಎಂದಿರುವ ಡಾ.ಮದನ್, 'ಮುನ್ನೆಚ್ಚರಿಕೆಯಾಗಿ ಒಳ್ಳೆಯ ಮೌತ್ ವಾಶ್ ಅಥವಾ ಬೆಟಾಡೀನ್ ನಿಂದ ಗಾರ್ಗಲ್ ಮಾಡಬೇಕು. ಅವಿಲ್ಲದಿದ್ದರೆ ಉಪ್ಪು ನೀರಿನಲ್ಲಾದರೂ ಆಗಾಗ್ಗೆ ಗಳಗಳ ಮಾಡಬೇಕು' ಎಂದಿದ್ದಾರೆ.
ಕಳೆದ ಜನವರಿಯಲ್ಲಿ ಬ್ರೆಜಿಲ್ ನ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಟೂತ್ ಬ್ರಶ್ ಗಳು ಮೈಕ್ರೋ ಆರ್ಗಾನಿಸಂಗಳ ಗುಡಾಣವಾಗಿರುತ್ತವೆ. ಆದ್ದರಿಂದ ಸೋಂಕಿನ ಸಾಧ್ಯತೆಯನ್ನು ಕಡಿಮೆ ಮಾಡಲು ಟೂತ್ ಬ್ರಶ್ ನ್ನು ಚೆನ್ನಾಗಿ ಒಣಗಿಸಿಡುವುದು, ಡಿಸಿನ್ಫೆಕ್ಟ್ ಮಾಡುವುದು ಅತ್ಯಗತ್ಯ. ಏಸಿಮ್ಟಾಮ್ಯಾಟಿಕ್ ಕೊರೊನಾ ಪ್ರಕರಣಗಳಲ್ಲಿ ಇದು ಇನ್ನೂ ಮುಖ್ಯ ಎಂದು ಹೇಳಲಾಗಿತ್ತು.