ಕಾಸರಗೋಡು: ಚಂಡಮಾರುತದಿಂದ ಕರಾವಳಿ ಪ್ರದೇಶಗಳಲ್ಲಿ ಸಮುದ್ರ ಮಟ್ಟ ಏರಿಕೆ ಮುಂದುವರೆದಿದೆ. ಭಾರೀ ಗಾಳಿ ಮತ್ತು ಮಳೆ ಕೇರಳದಾದ್ಯಂತ ಹಾನಿಗೊಳಗಾಗುತ್ತಿರುವುದು ಆತಂಕಮೂಡಿಸಿದೆ. ಜಿಲ್ಲೆಯ ಕರಾವಳಿಯ ತೀರದಲ್ಲಿರುವ ಮನೆಗಳಿಗೆ ಸಮುದ್ರದಿಂದ ತೆರೆಗಳು ಅಪ್ಪಳಿಸಿ ಭಯಾನಕತೆಗೆ ಸಾಕ್ಷಿಯಾಗಿದೆ. ಉಪ್ಪಳ ಮುಸೋಡಿಯಲ್ಲಿ ಶನಿವಾರ ಬೆಳಿಗ್ಗೆ ಕಣ್ಣು ಮಿಟುಕಿಸುವುದರಲ್ಲಿ ಮನೆಯೊಂದು ಕುಸಿದಿದೆ.
ಮುಸೋಡಿಯ ಮೂಸಾ ಅವರÉರಡು ಅಂತಸ್ಥಿನ ಮನೆ ಸಮುದ್ರದ ಹೆದ್ದೆರೆಗಳಿಗೆ ಸಂಪೂರ್ಣ ಕುಸಿದು ಬಿದ್ದಿದೆ. ಮುಂಜಾನೆ ಸಮುದ್ರದಲ್ಲಿ ತೀವ್ರ ಏರಿಕೆ ಕಂಡುಬಂತು. ಜನರನ್ನು ಸ್ಥಳಾಂತರಿಸಿದ್ದರಿಂದ ಜೀವಹಾನಿಗಳಿಂದ ಪಾರಾಗಲಾಗಿದೆ. ಸಮುದ್ರ ದಡದಲ್ಲಿರುವ ಎಲ್ಲಾ ಮನೆಗಳು ಯಾವುದೇ ಕ್ಷಣದಲ್ಲಿ ಕೊಚ್ಚಿಹೋಗುವ ಅಪಾಯದಲ್ಲಿದೆ. ಅನೇಕ ಮನೆಗಳಿಗೆ ಪ್ರವಾಹ ಉಂಟಾಗಿದ್ದು ವ್ಯಾಪಕ ಹಾನಿಯಾಗಿದೆ. ಮುಸೋಡಿಯ ಮರಿಯಮ್ಮ, ಆಸ್ಯಮ್ಮ ಎಂಬವರ ಮನೆಗಳು ಯಾವುದೇ ಕ್ಷಣದಲ್ಲೂ ಕುಸಿಯುವ ಹಂತದಲಿದೆ.
ಕೋವಿಡ್ ಕಾರ್ಯಾಚರಣೆಗೆ ತೊಡಕು:
ಜಿಲ್ಲೆಯ ಅನೇಕ ತಗ್ಗುಪ್ರದೇಶಗಳು ಜಲಾವೃತಗೊಂಡಿದೆ. ಗುಡ್ಡಗಾಡು ಪ್ರದೇಶಗಳಲ್ಲೂ ವ್ಯಾಪಕ ಹಾನಿಗೊಳಗಾದ ಸೂಚನೆಗಳಿದ್ದು, ಮರಗಳು ಧರಾಶಾಯಿಯಾಗಿದೆ. ಇದರಿಂದ ಹಲವೆಡೆ ಕೋವಿಡ್ ಕಾರ್ಯಾಚರಣೆಗೂ ದೊಡ್ಡ ತೊಡಕುಗಳಾಗಿರುವುದಾಗಿ ತಿಳಿದುಬಂದಿದೆ.
ವಿದ್ಯುತ್ ವೈತ್ಯಯ:
ಜಿಲ್ಲೆಯಾದ್ಯಂತ ಶುಕ್ರವಾರ ಸಂಜೆಯಿಂದ ತೀವ್ರ ಸ್ವರೂಪದ ವಿದ್ಯುತ್ ವೈತ್ಯಯ ಉಂಟಾಗಿದೆ. ಆಗೊಮ್ಮೆ ಈಗೊಮ್ಮೆ ಕಣ್ಣಾಮುಚ್ಚಾಲೆಯಾಡುವ ವಿದ್ಯುತ್ ಸರಬರಾಜಿನಿಂದ ಜನರು ಸಂಕಷ್ಟಕ್ಕೊಳಗಾಗಿರುವುದಾಗಿ ದೂರುಗಳು ಬಂದಿವೆ.
ಪ್ರಬಲ ಗಾಳಿಯು ಆಲಪ್ಪುಳ, ಇಡುಕ್ಕಿ ಮತ್ತು ವಯನಾಡ್ ಜಿಲ್ಲೆಗಳಲ್ಲಿ ವ್ಯಾಪಕ ಹಾನಿಯನ್ನುಂಟುಮಾಡಿದೆ. ಅನೇಕ ಮನೆಗಳು ಮತ್ತು ವಾಹನಗಳು ಹಾನಿಗೊಳಗಾದವು. ಚಲ್ಲಾಪಿಲ್ಲಿಯಾಗಿ ಮರಗಳು ಧರಾಶಾಯಿಯಾಗಿ ರಸ್ತೆ ಸಂಚಾರ ಮೊಟಕುಗೊಂಡಿದೆ. ಆಸ್ಪತ್ರೆಯನ್ನು ತಲುಪಲು ಸಾಧ್ಯವಾಗದೆ ಹೃದಯ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ.