HEALTH TIPS

ಎರಡನೇ ಅವಧಿಗೆ ಕೇರಳ ಸರ್ಕಾರ ಸಚಿವ ಸಂಪುಟದಲ್ಲಿ ಕೆ.ಕೆ.ಶೈಲಜಾಗೆ ಕೊಕ್: ಬದಲಾವಣೆಗೆ ಕಾರಣವೇನು?

      ತಿರುವನಂತಪುರ: ಕೊರೋನಾ ಸಮಯದಲ್ಲಿ ಪರಿಣಾಮಕಾರಿ ಕೆಲಸ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕೇರಳ ಸರ್ಕಾರದ ಸಚಿವೆ ಕೆ ಕೆ ಶೈಲಜಾ ಹೆಸರು ಗಳಿಸಿದ್ದರು. ಆದರೆ ಈ ಬಾರಿ ನೂತನ ಸಚಿವ ಸಂಪುಟದಲ್ಲಿ ಅವರನ್ನು ಕೈಬಿಡಲಾಗಿದೆ. ಶೈಲಜಾ ಅವರನ್ನು ಕೈಬಿಟ್ಟಿರುವುದು ದೇಶಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ಬಾರಿ ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದೆ.


     ಕೆ ಕೆ ಶೈಲಜಾ ಅವರನ್ನು ಸಂಪುಟದಿಂದ ಹೊರಗಿಟ್ಟಿದ್ದಕ್ಕೆ ಸಿಪಿಎಂನ ರಾಜ್ಯ ಸಮಿತಿಯ ಹಲವರು ಟೀಕೆ ವ್ಯಕ್ತಪಡಿಸಿದ್ದರು. ಆದರೆ ಪಾಲಿಟ್ ಬ್ಯೂರೋ ಸದಸ್ಯ ಕೊಡಿಯೇರಿ ಬಾಲಕೃಷ್ಣನ್ ಅವರು ವಿಸ್ತೃತವಾಗಿ ವಿವರಿಸಿದ ನಂತರ ಎಲ್ಲರೂ ಬಾಯಿಮುಚ್ಚಿ ಕುಳಿತಿದ್ದಾರೆ.

     ಶೈಲಜಾ ಅವರು ಪ್ರತಿನಿಧಿಸುವ ಕಣ್ಣೂರಿನಲ್ಲಿ ಕೂಡ ಅವರನ್ನು ಸಂಪುಟಕ್ಕೆ ಸೇರಿಸಬೇಕೆಂಬ ಒತ್ತಡ ಕೇಳಿಬರುತ್ತಿಲ್ಲ. ಕಣ್ಣೂರು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ ವಿ ಜಯರಾಜನ್, ಹಿರಿಯ ನಾಯಕರಾದ ಕೆ ಅನಂತಗೋಪಾಲನ್, ಕೆ ಕೆ ಜಯಚಂದ್ರನ್, ಸುಸಾನ್ ಕೋಡಿ ಮತ್ತು ಕೆ ಪಿ ಮೇರಿ ಅವರು ಶೈಲಜಾ ಅವರನ್ನು ಸಂಪುಟದಲ್ಲಿ ಸೇರಿಸುವ ಪರವಾಗಿ ಮಾತನಾಡಿದರು.

      ಆದಾಗ್ಯೂ, ಕೇವಲ ಒಬ್ಬ ವ್ಯಕ್ತಿಗೆ ವಿನಾಯಿತಿ ನೀಡಲಾಗುವುದಿಲ್ಲ ಎಂಬ ಅಧಿಕೃತ ನಾಯಕತ್ವದ ಅಭಿಪ್ರಾಯವಿತ್ತು ”ಎಂದು ಮೂಲವೊಂದು ತಿಳಿಸಿದೆ. ಕೆಲವು ಇತರ ರಾಜ್ಯ ಸಮಿತಿ ಸದಸ್ಯರು ಸರಿಯಾದ ಅನುಭವ ಮತ್ತು ಯುವಕರ ಸೇರ್ಪಡೆ ಉತ್ತಮ ನಿರ್ಧಾರವಾಗಿದೆ ಎಂದು ಹೇಳುತ್ತಾರೆ.

      ಕೊಡಿಯೇರಿ ಹೇಳಿದ್ದೇನು?: 

      ಪಾಲಿಟ್ ಬ್ಯೂರೋ ಸದಸ್ಯರು ಕೆಲ ದಿನಗಳ ಹಿಂದೆ ಹೊಸ ಮುಖಗಳಿಗೆ ಮಣೆ ಹಾಕಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರಂತೆ. ನಿನ್ನೆ ಸಭೆ ಸೇರಿದ ನಂತರ ಹೊಸ ಶಾಸಕರಿಗೆ ಸಚಿವ ಸ್ಥಾನ ನೀಡುವ ಪ್ರಸ್ತಾಪಕ್ಕೆ ಎಲ್ಲರೂ ಒಪ್ಪಿಕೊಂಡರು. ಆದರೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮತ್ತು ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಶೈಲಜಾ ಅವರನ್ನು ಸಂಪುಟದಿಂದ ಹೊರಗಿಟ್ಟರೆ ಸಾರ್ವಜನಿಕರಿಂದ ಅನಗತ್ಯ ಟೀಕೆಗಳು ವ್ಯಕ್ತವಾಗಬಹುದು ಎಂದು ಕೂಡ ಹೇಳಿದ್ದರಂತೆ.

    ಆದಾಗ್ಯೂ, ಕೇರಳ ಮೂಲದ ಪಾಲಿಟ್ ಬ್ಯೂರೋ ಸದಸ್ಯರಾದ ಕೊಡಿಯೇರಿ, ಪಿಣರಾಯಿ, ಎಸ್ ರಾಮಚಂದ್ರನ್ ಪಿಳ್ಳೈ ಮತ್ತು ಎಂ ಎ ಬೇಬಿ ಅವರು ಸಚಿವರಲ್ಲಿ ಒಬ್ಬರಿಗೆ ವಿನಾಯಿತಿ ನೀಡಿ ಅವರಿಗೆ ಈ ಬಾರಿ ಕೂಡ ಮಂತ್ರಿಗಿರಿ ನೀಡುವುದು ಸರಿಯಲ್ಲ, ಇತರರು ಸಹ ಉತ್ತಮ ಕೆಲಸ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು ಎಂದು ತಿಳಿದುಬಂದಿದೆ.

     ಕ್ಯಾಬಿನೆಟ್ ರಚನೆಯು ರಾಜ್ಯ ಸಮಿತಿಯ ವಿಶೇಷವಾದ್ದರಿಂದ, ಕೇಂದ್ರ ನಾಯಕರು ತಮ್ಮ ಕಾರ್ಯಸೂಚಿಯನ್ನು ಒತ್ತಾಯಿಸಲು ಬಯಸಲಿಲ್ಲ ಎಂದು ತಿಳಿದುಬಂದಿದೆ. ಕೊಡಿಯೇರಿಯನ್ನು ರಾಜ್ಯ ಕಾರ್ಯದರ್ಶಿಯಾಗಿ ಮರಳಿ ತರಲು ಪಾಲಿಟ್ ಬ್ಯೂರೋ ಸದಸ್ಯರಲ್ಲಿ ಒಮ್ಮತ ಮೂಡಿದೆ ಎಂದು ತಿಳಿದುಬಂದಿದೆ.

      ಶೈಲಜಾ ಕೈಬಿಟ್ಟದ್ದಕ್ಕೆ ಟೀಕೆ: ಆದರೆ ಕೆ ಕೆ ಶೈಲಜಾ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದು ತೀವ್ರ ಟೀಕೆಗೆ ಗುರಿಯಾಗಿದೆ. ಸಿಪಿಎಂನ ಕೆಲವು ನಾಯಕರು ಶೈಲಜಾ ಅವರಿಗೆ ಮತ್ತೊಂದು ಬಾರಿ ಸಚಿವೆಯಾಗಲು ಅವಕಾಶ ನೀಡಬೇಕಿತ್ತು ಎಂದು ಹೇಳಲಾಗುತ್ತಿದ್ದರೂ ಪಕ್ಷ ತನ್ನ ನಿಲುವು, ಧೋರಣೆಯನ್ನು ಬದಲಿಸಲಿಲ್ಲ, ಶೈಲಜಾ ಅವರನ್ನು ಪಕ್ಷದ ವಿಪ್ ಆಗಿ ನೇಮಿಸಿ ಟಿ.ಪಿ.ರಾಮಕೃಷ್ಣನ್ ಅವರನ್ನು ಶಾಸಕಾಂಗ ಪಕ್ಷದ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries