ನವದೆಹಲಿ: ದೇಶದ ಸರ್ಕಾರಿ ಸ್ವಾಮ್ಯದ ವಾಹಿನಿ ದೂರದರ್ಶನ (ಡಿಡಿ)ವು ಬಿಬಿಸಿ ವರ್ಲ್ಡ್ ಮಾದರಿಯಲ್ಲಿ ಅಂತಾರಾಷ್ಟ್ರೀಯ ವಾಹಿನಿಯನ್ನು ಆರಂಭಿಸಲು ಈಗ ಅಗತ್ಯ ಸಿದ್ಧತೆ ನಡೆಸುತ್ತಿದೆ.
ಜಾಗತಿಕವಾಗಿ ಭಾರತದ ವಿರುದ್ಧ ವ್ಯವಸ್ಥಿತವಾಗಿ ನಡೆಯುತ್ತಿರುವ ಷಡ್ಯಂತ್ರಗಳ ಭಾಗವಾಗಿ ಬರುವ ಟೀಕೆಗಳಿಗೆ ಸೂಕ್ತ ಪ್ರತ್ಯುತ್ತರ ನೀಡುವ ಸಲುವಾಗಿ ಈ ವಾಹಿನಿಯನ್ನು ಆರಂಭ ಮಾಡುವುದಾಗಿ ದೂರದರ್ಶನ ತಿಳಿಸಿದೆ. ಜಾಗತಿಕ ವಿಚಾರಗಳನ್ನು ನೀಡುವ ಮತ್ತು ಭಾರತೀಯ ನೀತಿ ನಿರೂಪಣೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಬಿಂಬಿಸುವ ನಿಟ್ಟಿನಲ್ಲಿ ‘ಡಿಡಿ ಇಂಟರ್ನ್ಯಾಷನಲ್’ ವಾಹಿನಿ ಆರಂಭಿಸಲು ಸಿದ್ಧತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಾಹಿನಿಗಳನ್ನು ಆರಂಭಿಸುವಲ್ಲಿ ತಜ್ಞತೆ ಪಡೆದಿರುವ ಸಂಸ್ಥೆಗಳು,ಸೂಕ್ತ ವ್ಯಕ್ತಿಗಳನ್ನು ಬಳಸಿಕೊಳ್ಳುವತ್ತಲೂ ದೂರದರ್ಶನ ಚಿಂತನೆ ನಡೆಸಿದೆ. ಇದಕ್ಕಾಗಿ ಬಿಡ್ಡಿಂಗ್ ಆಹ್ವಾನಿಸಲಾಗಿದ್ದು, ಅರ್ಹರಿಂದ ಈ ಕುರಿತಂತೆ ವಿಸ್ತೃತ ವರದಿ ಪಡೆದು ಪರಿಶೀಲನೆ ನಡೆಸಲಾಗುತ್ತದೆ ಎಂದು ಅದು ತಿಳಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಅವಹೇಳನ ಹೆಚ್ಚಾಗುತ್ತಿರುವ ಬೆನ್ನಲ್ಲೇ ಡಿಡಿ ಇಂತಹ ತೀರ್ಮಾನ ಕೈಗೊಂಡಿರುವುದು ಮಹತ್ವದ್ದಾಗಿದೆ.