ಒಂದೆಲಗ ಸೊಪ್ಪಿನ ತಂಬುಳಿ
ಬೇಕಾಗುವ ಸಾಮಗ್ರಿಗಳು: ಒಂದೆಲಗ ಎಲೆ - 20 ರಿಂದ 30, ಹಸಿ ಮೆಣಸಿನಕಾಯಿ - 5 ರಿಂದ 7, ಜೀರಿಗೆ - 1 ಚಮಚ, ಕಾಳುಮೆಣಸು - 7, ಗಟ್ಟಿ ಮೊಸರು - ಒಂದೂವರೆ ಕಪ್, ತೆಂಗಿನತುರಿ - 1 ಕಪ್, ಎಣ್ಣೆ - 2 ಚಮಚ, ಉಪ್ಪು - ರುಚಿಗೆ
ತಯಾರಿಸುವ ವಿಧಾನ: ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ಮೇಲೆ ಅದಕ್ಕೆ ಜೀರಿಗೆ, ಕಾಳುಮೆಣಸು, ಹಸಿ ಮೆಣಸಿನಕಾಯಿ ಹಾಗೂ ಹೆಚ್ಚಿರುವ ಒಂದೆಲಗ ಸೊಪ್ಪು ಹಾಕಿ ಸಣ್ಣ ಉರಿಯಲ್ಲಿ ಬಾಡಿಸಿಕೊಳ್ಳಿ ಎಣ್ಣೆಯಿಂದ ತೆಗೆಯಿರಿ. ಅದಕ್ಕೆ ತೆಂಗಿನತುರಿ ಹಾಕಿ 1 ನಿಮಿಷ ಹುರಿದುಕೊಳ್ಳಿ. ಹುರಿದುಕೊಂಡ ಸಾಮಗ್ರಿಗಳು ತಣ್ಣಗಾದ ಮೇಲೆ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸಿ ಜಾರಿನಲ್ಲಿ ನೀರು ಹಾಕದೇ ರುಬ್ಬಿಕೊಳ್ಳಿ. ನಂತರ ಅದಕ್ಕೆ ಮೊಸರು ಸೇರಿಸಿ ರುಬ್ಬಿಕೊಳ್ಳಿ. ಇದಕ್ಕೆ ಒಗ್ಗರಣೆ ಹಾಕಿದರೆ ಒಂದೆಲಗ ಸೊಪ್ಪಿನ ತಂಬುಳಿ ಸವಿಯಲು ಸಿದ್ಧ. ಇದನ್ನು ಅನ್ನ, ರಾಗಿ ಮುದ್ದೆಯ ಜೊತೆ ತಿನ್ನಲು ಚೆನ್ನಾಗಿರುತ್ತದೆ.
ಹುಳಿ ಗೊಜ್ಜು
ಬೇಕಾಗುವ ಸಾಮಗ್ರಿಗಳು: ಹುಣಸೆಹಣ್ಣು - 1 ಬಟ್ಟಲು, ಹುರಿಗಡಲೆ - 2 ಚಮಚ, ಹಸಿ ಮೆಣಸಿನಕಾಯಿ - 6 ರಿಂದ 8, ಸಾಸಿವೆ- 1 ಚಮಚ, ಕರಿಬೇವು - 8 ರಿಂದ 10 ಎಸಳು, ಉಪ್ಪು - ರುಚಿಗೆ ತಕ್ಕಷ್ಟು, ಎಣ್ಣೆ - 2 ಚಮಚ
ತಯಾರಿಸುವ ವಿಧಾನ: ಮೊದಲು ಮಿಕ್ಸಿ ಜಾರಿನಲ್ಲಿ ಹುರಿಗಡಲೆಯನ್ನು ಪುಡಿ ಮಾಡಿಕೊಳ್ಳಬೇಕು. ಅದೇ ಜಾರಿಗೆ ಹುಣಸೆಹಣ್ಣನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಒಂದು ಕಡಾಯಿಯಲ್ಲಿ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಬೇಕು. ಅದಕ್ಕೆ ಸಾಸಿವೆ, ಕರಿಬೇವು, ಹಸಿ ಮೆಣಸಿನಕಾಯಿಯನ್ನು 20 ಸೆಕೆಂಡುಗಳ ಕಾಲ ಬಾಡಿಸಿಕೊಳ್ಳಬೇಕು. ಇದಕ್ಕೆ ರುಬ್ಬಿಕೊಂಡಿರುವ ಮಿಶ್ರಣವನ್ನು ಹಾಕಿ, ಒಂದು ಲೋಟ ನೀರು ಸೇರಿಸಿ ಚೆನ್ನಾಗಿ ಕಲೆಸಬೇಕು. ಇದಕ್ಕೆ ಉಪ್ಪು ಸೇರಿಸಿ 2ರಿಂದ 3 ನಿಮಿಷಗಳ ಕಾಲ ಕುದಿಯಲು ಬಿಡಬೇಕು. ಈ ಹುಳಿ ಗೊಜ್ಜನ್ನು ಪೊಂಗಲ್, ಇಡ್ಲಿ, ದೋಸೆಯ ಜೊತೆ ತಿನ್ನಬಹುದು.
ಬೆಟ್ಟದ ನೆಲ್ಲಿಕಾಯಿ ತೊಕ್ಕು
ಬೇಕಾಗಿರುವ ಸಾಮಗ್ರಿಗಳು: ಬೆಟ್ಟದ ನೆಲ್ಲಿಕಾಯಿ - 2 ಕಪ್, ಒಣ ಮೆಣಸಿನಕಾಯಿ - 30 ರಿಂದ 40, ಇಂಗು - ಸ್ವಲ್ಪ, ಕರಿಬೇವು - 8ರಿಂದ 10 ಎಸಳು, ಸಾಸಿವೆ - 1 ಚಮಚ, ಎಣ್ಣೆ - 4 ಚಮಚ,
ಉಪ್ಪು - ರುಚಿಗೆ
ತಯಾರಿಸುವ ವಿಧಾನ: ಕುಕರ್‌ನಲ್ಲಿ ಬೆಟ್ಟದ ನೆಲ್ಲಿಕಾಯಿಗಳನ್ನು ಇಟ್ಟು 2 ವಿಷಲ್ ಕೂಗಿಸಬೇಕು. ಒಣಮೆಣಸನ್ನು ಎಣ್ಣೆ ಹಾಕದೇ ಬಾಣಲಿಯಲ್ಲಿ ಹುರಿದುಕೊಳ್ಳಬೇಕು. ಮಿಕ್ಸಿ ಜಾರಿಗೆ ಹುರಿದಿರುವ ಒಣಮೆಣಸು, ಬೇಯಿಸಿದ ನೆಲ್ಲಿಕಾಯಿ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ದೊಡ್ಡ ಬಾಣಲೆಯೊಂದರಲ್ಲಿ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ, ಕರಿಬೇವು, ಇಂಗು ಹಾಗೂ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ಸಣ್ಣ ಉರಿಯಲ್ಲಿ 10 ರಿಂದ 15 ನಿಮಿಷಗಳ ಕಾಲ ಎಣ್ಣೆ ಬಿಡುವ ತನಕ ಬಾಡಿಸಿಕೊಳ್ಳಬೇಕು. ತಣ್ಣಗಾದ ನಂತರ ಗಾಜಿನ ಪಾತ್ರೆಯಲ್ಲಿ ಹಾಕಿ ತಿಂಗಳುಗಟ್ಟಲೆ ಬಳಸಬಹುದು. ಇದು ಆರೋಗ್ಯಕ್ಕೂ ಉತ್ತಮ.