ವಾರಾಣಸಿ(ಉತ್ತರ ಪ್ರದೇಶ): ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವಾರಾಣಸಿಯ ವೈದ್ಯರು, ದಾದಿಯರು, ಇತರ ವೈದ್ಯಕೀಯ ಸಿಬ್ಬಂದಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಶ್ಲಾಘಿಸಿದರು.
ವಾರಾಣಸಿಯ ಆರೋಗ್ಯ ಕಾರ್ಯಕರ್ತರೊಂದಿಗೆ ವಿಡಿಯೊ ಸಂವಾದ ನಡೆಸಿದ ಮೋದಿ, 'ಮನೆ ಬಾಗಿಲಿನಲ್ಲೇ ರೋಗಿಗಳಿಗೆ ಚಿಕಿತ್ಸೆ( ಜಹಾ ಬಿಮರ್, ವಹೀ ಉಪಚಾರ್) ನೀಡುವ ಮೂಲಕ ಕೋವಿಡ್ ಎರಡನೇ ಅಲೆಯ ಒತ್ತಡವನ್ನು ಕಡಿಮೆ ಮಾಡಬಹುದು' ಎಂದು ಹೇಳಿದರು.
'ಬಹುತೇಕ ಕೆಲಸಗಳು ಆಗಿವೆ. ಆದರೆ ಉತ್ತರಪ್ರದೇಶದ ಪೂರ್ವ ಭಾಗದ ಗ್ರಾಮೀಣ ಪ್ರದೇಶದ ಮೇಲೆ ಹೆಚ್ಚಿನ ಗಮನವಿಡುವ ಅವಶ್ಯಕತೆ ಇದೆ. ಸೋಂಕು ಬಹಳ ತೀವ್ರವಾಗಿದ್ದು ಎಷ್ಟೇ ಪ್ರಯತ್ನಿಸಿದರೂ ಹಲವಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ' ಎಂದು ಗದ್ಗದಿತರಾಗಿ ನುಡಿದರು.
'ನೀವು ಸೋಂಕನ್ನು ಗಮನಾರ್ಹವಾಗಿ ನಿಯಂತ್ರಿಸಿದ್ದೀರಿ. ಆದರೆ ಅಷ್ಟಕ್ಕೇ ಸಮಾಧಾನ ಪಡುವಂತಿಲ್ಲ. ಏಕೆಂದರೆ ಇದು ದೀರ್ಘ ಕಾಲದ ಹೋರಾಟ' ಎಂದು ಅವರು ವಾರಾಣಸಿಯ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಲ್ಲಿ ಅಭಿಪ್ರಾಯ ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಪ್ರಧಾನಿ ಅವರು, ಪಂಡಿತ್ ರಾಜನ್ ಮಿಶ್ರಾ ಆಸ್ಪತ್ರೆ ಸೇರಿದಂತೆ ನಗರದ ಇತರ ಕಡೆಗಳಲ್ಲಿರುವ ಕೋವಿಡ್ ಆಸ್ಪತ್ರೆಗಳಲ್ಲಿ ಸಿದ್ಧತೆಯನ್ನು ಪರಿಶೀಲಿಸಿದರು.