ಚೆನ್ನೈ: ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಆಕ್ಸಿಜನ್‍ಗೆ ಭಾರೀ ಬೇಡಿಕೆ ಬಂದಿದೆ. ವಿವಿಧ ರಾಜ್ಯಗಳು ಆಕ್ಸಿಜನ್ ಪಾಲನ್ನು ಮರು ಹಂಚಿಕೆ ಮಾಡಬೇಕು ಎಂದು ಕೇಂದ್ರದ ಮೊರೆ ಹೋಗಿವೆ.
ಕೇರಳ ರಾಜ್ಯ ಅಗತ್ಯಕ್ಕಿಂತ ಹೆಚ್ಚಿರುವ ಆಕ್ಸಿಜನ್ ಅನ್ನು ತಮಿಳುನಾಡು ಮತ್ತು ಆಂಧ್ರ ಪ್ರದೇಶಕ್ಕೆ ಹಂಚಿಕೆ ಮಾಡುತ್ತಿತ್ತು. ಆದರೆ ಈಗ ರಾಜ್ಯದಲ್ಲಿಯೇ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆಯನ್ನು ಸ್ಥಗಿತಗೊಳಿಸಿದೆ.
ಇದರಿಂದಾಗಿ ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ಕೇಂದ್ರಕ್ಕೆ ಆಕ್ಸಿಜನ್ ಪಾಲನ್ನು ಮರು ಹಂಚಿಕೆ ಮಾಡಬೇಕು ಎಂದು ಪತ್ರವನ್ನು ಬರೆದಿವೆ. ಮೇ 15ರ ವೇಳೆಗೆ ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 6 ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆ ಇದ್ದು, ಅಕ್ಕಪಕ್ಕದ ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆ ನಿಲ್ಲಿಸಿದೆ.
ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ರಾಜ್ಯಗಳ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳು ಸಾವನ್ನಪ್ಪಿದ ಪ್ರಕರಣಗಳು ವರದಿಯಾಗಿವೆ. ತಮಿಳುನಾಡು ಒಡಿಶಾದಿಂದ ಬರುವ ಆಕ್ಸಿಜನ್ ಎಕ್ಸ್‍ಪ್ರೆಸ್ ರೈಲಿಗಾಗಿ ಕಾಯುತ್ತಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ವಾರದ ಮೊದಲ ದಿನವೇ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ಅಕ್ಕ-ಪಕ್ಕದ ರಾಜ್ಯಗಳಿಗೆ ನಾವು ಆಕ್ಸಿಜನ್ ಪೂರೈಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಆಕ್ಸಿಜನ್ ಪೂರೈಕೆ ಮಾಡಲು ಸರ್ಕಾರ ಬಳಕೆ ಮಾಡದೇ ಉಳಿದಿದ್ದ 2,473 ಸಿಲಿಂಡರ್‍ಗಳನ್ನು ವಶಕ್ಕೆ ಪಡೆದಿದೆ. ಕೇಂದ್ರಕ್ಕೆ ಪತ್ರ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಸಹ ಕೇಂದ್ರಕ್ಕೆ ಪತ್ರ ಬರೆದು ಆಕ್ಸಿಜನ್ ಪಾಲನ್ನು ಮರು ಹಂಚಿಕೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಪ್ರಸ್ತುತ ರಾಜ್ಯಕ್ಕೆ 440 ಮೆಟ್ರಿಕ್ ಟನ್ ಹಂಚಿಕೆಯಾಗಿದೆ. ಮುಂದಿನ ಎರಡು ವಾರದಲ್ಲಿ ಇದನ್ನು 880 ಮೆಟ್ರಿಕ್ ಟನ್‍ಗೆ ಹೆಚ್ಚಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಮಂಗಳವಾರ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕೇಂದ್ರಕ್ಕೆ ಪತ್ರವನ್ನು ಬರೆದಿದ್ದಾರೆ. ಏಪ್ರಿಲ್ 24ರಂದು ರಾಜ್ಯಕ್ಕೆ 480 ಮೆಟ್ರಿಕ್ ಟನ್ ಆಕ್ಸಿಜನ್ ಹಂಚಿಕೆ ಮಾಡಲಾಗಿದೆ. ಮೇ 8ಕ್ಕೆ ಅದನ್ನು 590 ಮೆಟ್ರಿಕ್ ಟನ್‍ಗೆ ಹೆಚ್ಚಿಸಲಾಗಿದೆ. ಈಗ ನಮ್ಮ ಕೋವಿಡ್ ಪ್ರಕರಣಗಳ ಸಂಖ್ಯೆ 1,87,392 ಆಗಿದ್ದು, 910 ಮೆಟ್ರಿಕ್ ಟನ್‍ಗೆ ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದಾರೆ.