ನವದೆಹಲಿ: ವಾರದ ಎಲ್ಲ ದಿನಗಳಲ್ಲೂ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಬೇಕು ಮತ್ತು ಹೆಚ್ಚು ಅವಧಿ ಕಾರ್ಯನಿರ್ವಹಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವು ಎಲ್ಲ ರಾಜ್ಯ ಸರ್ಕಾರಗಳಿಗೆ ಭಾನುವಾರ ಸೂಚನೆ ನಡೆಸಿದೆ.
ಬಡವರಿಗೆ ಸಬ್ಸಿಡಿ ರೂಪದಲ್ಲಿ ಮತ್ತು ಉಚಿತವಾಗಿ ಆಹಾರ ಧಾನ್ಯಗಳು ಸಕಾಲದಲ್ಲಿ ಮತ್ತು ಸುರಕ್ಷಿತವಾಗಿ ವಿತರಿಸಲು ಈ ಕ್ರಮದಿಂದ ಅನುಕೂಲವಾಗಲಿದೆ ಎಂದು ಕೇಂದ್ರ ಆಹಾರ ಸಚಿವಾಲಯವು ತಿಳಿಸಿದೆ.
ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಸ್ತುತ ಜಾರಿಗೊಳಿಸಿರುವ ಲಾಕ್‌ಡೌನ್‌ನಿಂದ ನ್ಯಾಯ ಬೆಲೆ ಅಂಗಡಿಗಳ ಕಾರ್ಯನಿರ್ವಹಿಸುವ ಅವಧಿಯನ್ನು ಕಡಿಮೆಗೊಳಿಸಲಾಗಿದೆ. ಇದರಿಂದ, ಫಲಾನುಭವಿಗಳಿಗೆ ಸಕಾಲಕ್ಕೆ ಆಹಾರ ಧಾನ್ಯಗಳು ದೊರೆಯುತ್ತಿಲ್ಲ ಎಂದು ಆಹಾರ ಸಚಿವಾಲಯಕ್ಕೆ ಹಲವು ಸಂಘಟನೆಗಳು ದೂರು ಸಲ್ಲಿಸಿದ್ದವು.