ನವದೆಹಲಿ: ದೇಶೀಯ ಸರಬರಾಜು, ಕೋವಿಡ್-19 ಔಷಧಗಳ ವಾಣಿಜ್ಯ ಆಮದಿನ ವಸ್ತುಗಳಿಗೆ, ಲಸಿಕೆಗಳು, ಆಕ್ಸಿಜನ್ ಕಾನ್ಸಂಟ್ರೇಟರ್ ಗಳಿಗೆ ಜಿಎಸ್ ಟಿ ವಿನಾಯಿತಿಯನ್ನು ನೀಡಿದರೆ ಅವುಗಳ ಬೆಲೆ ಹೆಚ್ಚಾಗಬಹುದು ಎಂದು ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಒಳ ಬರುವುದರ ಮೇಲೆ ಪಾವತಿ ಮಾಡಲಾದ ತೆರಿಗೆಗಳನ್ನು ಸರಿದೂಗಿಸುವುದಕ್ಕೆ ಉತ್ಪಾದಕರಿಗೆ ಸಾಧ್ಯವಾಗುವುದಿಲ್ಲವಾದ ಕಾರಣ ಈ ಸರಕುಗಳು ಗ್ರಾಹಕರಿಗೆ ದುಬಾರಿಯಾಗಲಿವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ದೇಶೀಯ ಸರಬರಾಜು ಸರಕುಗಳು ಹಾಗು ಲಸಿಕೆಗೆ ಸಂಬಂಧಿಸಿದಂತೆ ವಾಣಿಜ್ಯ ಆಮದುಗಳಿಗೆ ಶೇ.5 ರಷ್ಟು ಜಿಎಸ್ ಟಿ ವಿಧಿಸಲಾಗುತ್ತಿದೆ. ಕೋವಿಡ್-19 ಔಷಧಗಳು ಹಾಗೂ ಆಕ್ಸಿಜನ್ ಕಾನ್ಸಂಟ್ರೇಟರ್ ಗಳಿಗೆ ಶೇ.12 ರಷ್ಟು ಜಿಎಸ್ ಟಿ ವಿಧಿಸಲಾಗುತ್ತಿದೆ.
" ಈ ಸರಕುಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿಯನ್ನು ನೀಡಿದಲ್ಲಿ, ಇನ್ಪುಟ್ ತೆರಿಗೆಯನ್ನು ಸರಿದೂಗಿಸಲು ಸಾಧ್ಯವಾಗದೇ, ತೆರಿಗೆ ವಿನಾಯಿತಿಯ ಲಾಭವನ್ನು ಕೊನೆಯ ಗ್ರಾಹಕನಿಗೆ ತಲುಪಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಶೇ.5 ರಷ್ಟು ಜಿಎಸ್ ಟಿ ದರದಿಂದ ಉತ್ಪಾದಕರು ಐಟಿಸಿಯನ್ನು ಬಳಕೆ ಮಾಡಿಕೊಳ್ಳಬಹುದಾಗಿದ್ದು, ಐಟಿಸಿ ಹೆಚ್ಚುವರಿ ಆದಲ್ಲಿ ಮರುಪಾವತಿಗೆ ಅವಕಾಶವಿರಲಿದೆ, ಆದ್ದರಿಂದ ಜಿಎಸ್ ಟಿ ವಿನಾಯಿತಿ ಗ್ರಾಹಕರಿಗೆ ಸಹಕಾರಿಯಾಗದೇ ಪ್ರತಿರೋಧಕವಾಗಬಲ್ಲದು ಎಂದು ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.
ಒಂದು ವಸ್ತುವಿನಿಂದ ಇಂಟಿಗ್ರೇಟೆಡ್ ಜಿಎಸ್ ಟಿ ( ಐಜಿಎಸ್ ಟಿ) ಯ ಮೂಲಕ 100 ರೂಪಾಯಿ ಸಂಗ್ರಹವಾಗಿದ್ದರೆ, ಕೇಂದ್ರ ಹಾಗೂ ರಾಜ್ಯಗಳಿಗೆ ಕೇಂದ್ರ ಜಿಎಸ್ ಟಿ ಹಾಗೂ ರಾಜ್ಯ ಜಿಎಸ್ ಟಿಯಿಂದ ತಲಾ 50 ರೂಪಾಯಿ ಹಂಚಿಕೆಯಾಗುತ್ತದೆ.
ಸಿಜಿಎಸ್ ಟಿಯ ಶೇ.41 ರಷ್ಟು ಆದಾಯ ರಾಜ್ಯಗಳಿಗೆ ಹೋಗುತ್ತದೆ, 100 ರೂಪಾಯಿಗಳಲ್ಲಿ ಒಟ್ಟಾರೆ 70.50 ರೂಪಾಯಿ ರಾಜ್ಯಗಳಿಗೇ ಹೋಗಲಿದೆ ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.
ವಾಸ್ತವದಲ್ಲಿ ಶೇ.5 ರಷ್ಟು ಜಿಎಸ್ ಟಿ ಲಸಿಕೆಯನ್ನು ತಯಾರಿಸುವ ದೇಶಿಯ ಉತ್ಪಾದಕ ಹಾಗೂ ದೇಶದ ಪ್ರಜೆಗಳ ಹಿತದೃಷ್ಟಿಯಲ್ಲಿಯೇ ಇದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಒಂದು ದಿನದ ಹಿಂದೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ದೇಣಿಗೆ ನೀಡಲಾಗುವ ಆಕ್ಸಿಜನ್ ಕಾನ್ಸಂಟ್ರೇಟರ್, ಸಿಲೆಂಡರ್, ಕ್ರಯೋಜನಿಕ್ ಸ್ಟೋರೇಜ್ ಟ್ಯಾಂಕ್, ಕೋವಿಡ್-19 ಸಂಬಂಧಿತ ಔಷಧಗಳ ಮೇಲೆ ಜಿಎಸ್ ಟಿ ವಿನಾಯಿತಿ ನೀಡಬೇಕೆಂದು ಮನವಿ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಿರ್ಮಲಾ ಸೀತಾರಾಮನ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ಉಲ್ಲೇಖಿಸಿರುವ ಸರಕುಗಳಿಗೆ ಈಗಾಗಲೇ ತೆರಿಗೆ ವಿನಾಯ್ತಿ ನೀಡಲಾಗಿದೆ ಎಂದು ಹೇಳಿದ್ದಾರೆ.