ಕಾಸರಗೋಡು: ಲಾಕ್‍ಡೌನ್ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಾಸರಗೋಡಿನಲ್ಲಿ ಇಬ್ಬರನ್ನು ಜನರನ್ನು ಬಂಧಿಸಿರುವುದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ ಘಟನೆ ಬೇಕಲದಲ್ಲಿ ನಡೆದಿದೆ. ಇಬ್ಬರು ವ್ಯಕ್ತಿಗಳನ್ನು ಪೋಲೀಸರು ವಶಕ್ಕೆ ತೆಗೆದುಕೊಂಡಿರುವರೆಂದು ಆರೋಪಿಸಿ ನೂರಾರು ಜನರು ಪೋಲೀಸರ ವಿರುದ್ದ ಪ್ರತಿಭಟನೆ ನಡೆಸಿದರು. ಎರಡು ಗಂಟೆಗಳ ಕಾಲ ಪೋಲೀಸರನ್ನು ದಿಗ್ಬಂಧನಗೊಳಿಸಿ ರಸ್ತೆ ತಡೆಯನ್ನೂ ನಡೆಸಲಾಯಿತು.
ಅಕ್ರಮ ಮರಳು ಕಳ್ಳಸಾಗಣೆಯನ್ನು ನಿಲ್ಲಿಸಿದ ವ್ಯಕ್ತಿಗಳಿಬ್ಬರನ್ನು ಮರಳು ಮಾಫಿಯಾದ ಸಹಾಯಕರಾದ ಪೋಲೀಸ್ ಅಧಿಕಾರಿಗಳು ವಿನಾಃ ಕಾರಣ ಬಂಧಿಸಿರುವರು ಎಂದು ಸಾರ್ವಜನಿಕರು ಆರೋಪಿಸಿದರು. ಆದರೆ, ಲಾಕ್‍ಡೌನ್ ಉಲ್ಲಂಘಿಸಿದ್ದಕ್ಕಾಗಿ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಬಿಜೆಪಿ-ಸಿಪಿಎಂ ಮುಖಂಡರು ಮತ್ತು ಮೀನುಗಾರರ ಮುಖಂಡರು ಪೋಲೀಸರೊಂದಿಗೆ ನಡೆಸಿದ ಚರ್ಚೆಯ ಬಳಿಕ ಇಬ್ಬರು ಬಂಧಿತರನ್ನು ಬಿಡುಗಡೆ ಮಾಡಲಾಗಿದೆ. ರಾಜಕೀಯ ಮುಖಂಡರು ಮತ್ತು ಹಿರಿಯ ಪೋಲೀಸ್ ಅಧಿಕಾರಿಗಳ ಸಂಧಾನದ ತರುವಾಯ ಪ್ರತಿಭಟನೆ ಕೈಬಿಡಲಾಯಿತು.