ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಎನ್‍ಡಿಎ ವ್ಯಾಪಕವಾಗಿ ಹಣ ಮತ್ತು ವಸ್ತುಗಳನ್ನು ಮತದಾರರಿಗೆ ಹಂಚಿರುವುದು ಹಾಗೂ ಸಿಪಿಎಂ ಅಲ್ಪಸಂಖ್ಯಾತ ಪ್ರದೇಶ ಕೇಂದ್ರೀಕರಿಸಿ ನಡೆಸಿರುವ ಪ್ರಚಾರದಿಂದ ಮತಗಳ ಧ್ರುವೀಕರಣ ನಡೆದು ಬಹುಮತದಲ್ಲಿ ಗಣನೀಯ ಕಡಿತವುಂಟಾಗಿರುವುದಾಗಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ತಿಳಿಸಿದ್ದಾರೆ.
ಅವರು ಕಾಸರಗೋಡು ಪ್ರೆಸ್‍ಕ್ಲಬ್‍ನಲ್ಲಿ ಬುಧವಾರ ನಡೆದ ಮೀಟ್ ದಿ ಪ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮವಹಿಸುವುದಾಗಿ ತಿಳಿಸಿದ ಅವರು, ಮಂಜೇಶ್ವರ ಕ್ಷೇತ್ರದಲ್ಲಿನ ಆಸ್ಪತ್ರೆಗಳನ್ನು 24ತಾಸು ಕಾರ್ಯಾಚರಿಸುವ ಆಸ್ಪತ್ರೆಗಳಾಗಿ ಬದಲಾಯಿಸುವುದು ಪ್ರಥಮ ಆದ್ಯತೆಯಾಗಿದೆ. ಮುಂದಿನ ಚುನಾವಣೆಯಲ್ಲಿ ಅಭಿವೃದ್ಧಿಯನ್ನು ಮಾನದಂಡವಾಗಿರಿಸಿ ಮತ ಯಾಚಿಸುವ ರೀತಿಯಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಕಾರ್ಯಗಳನ್ನು ನಡೆಸುವುದು ಗುರಿಯಾಗಿದೆ ಎಂದು ತಿಳಿಸಿದರು.