HEALTH TIPS

ಕೊರೊನಾ ಸೋಂಕಿನಿಂದ ನಿವೃತ್ತ ಐಪಿಎಸ್ ಅಧಿಕಾರಿ ಕೆ.ವಿ.ಆರ್ ಠಾಗೋರ್ ನಿಧನ

               ಬೆಂಗಳೂರು : ಕೆ.ವಿ.ಆರ್ ಠ್ಯಾಗೂರ್ ಅಂತಲೇ ಪೊಲೀಸ್ ಇಲಾಖೆಯಲ್ಲಿ ಚಿರಸ್ಥಾಯಿಯಾಗಿ ಉಳಿಯುವ ಹೆಸರು ಗಳಿಸಿದ್ದ ಚಿಕ್ಕಮಗಳೂರು ಮೂಲದ ನಿವೃತ್ತ ಐಪಿಎಸ್ ಅಧಿಕಾರಿ ಕೆ.ವಿ. ರವೀಂದ್ರನಾಥ ಠಾಗೋರ್ ಅವರು ಕೊರೊನಾ ಸೋಂಕಿನಿಂದ ಬುಧವಾರ ಮೃತಪಟ್ಟಿದ್ದಾರೆ.

          ಚಿಕ್ಕಮಗಳೂರಿನ ಶೃಂಗೇರಿ ಸಮೀಪದ ಕೊಡತಲೂರಿನ ಕೆ.ವಿ.ಆರ್.ಠಾಗೋರ್ ಅವರು ವಾರ್ತಾ ಇಲಾಖೆಯ ಆಯುಕ್ತರಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ಬಳಿಕ ಜಯನಗರದಲ್ಲಿ ವಾಸವಾಗಿದ್ದ ಕೆ.ವಿ.ಆರ್. ಠಾಗೋರ್ ಅವರಿಗೆ ಕೆಲ ದಿನಗಳ ಹಿಂದೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ಪಾಸಿಟಿವ್ ಸೊಂಕು ಇರುವುದು ದೃಢಪಟ್ಟಿದ್ದರಿಂದ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೆ.ವಿ.ಆರ್. ಠಾಗೋರ್ ಅವರು ಬುಧವಾರ ಮೃತಪಟ್ಟಿದ್ದು, ಪೊಲೀಸ್ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರು ಕಂಬನಿ ಮಿಡಿದಿದ್ದಾರೆ.


         ಕೆ.ವಿ. ರವೀಂದ್ರನಾಥ್ ಠಾಗೋರ್ ಬಾಲ್ಯದಿಂದಲೇ ಕುವೆಂಪು ಅವರ ವಿಚಾರಧಾರೆಗೆ ಪ್ರಭಾವಿತರಾಗಿದ್ದರು. 1968 ರಲ್ಲಿ ವಿಜ್ಞಾನದಲ್ಲಿ ಪದವಿ ಮುಗಿಸಿದ್ದ ಠಾಗೋರ್ ಅವರು ಭಾರತೀಯ ತತ್ವಶಾಸ್ತ್ರದಲ್ಲಿ ಎಂಎ ಪದವಿ ಗಳಿಸಿದ್ದರು. ಆನಂತರ ಆಂತಾರಾಷ್ಟ್ರೀಯ ಕಾನೂನು ವಿಷಯದಲ್ಲಿ 1972 ರಲ್ಲಿ ಎಲ್‌ಎಲ್ ಬಿ ಓದಿದ್ದರು. ಆ ಬಳಿಕ ಕರ್ನಾಟಕ ಪೊಲೀಸ್ ಸೇವೆಗೆ ಸೇರಿದ ಠಾಗೋರ್ ಅವರು 1976 ರಲ್ಲಿ ತುಮಕೂರು ಜಿಲ್ಲೆಯ ತಿಪಟೂರು ಉಪ ವಿಭಾಗಾದ ಡಿವೈಎಸ್ಪಿಯಾಗಿ ಅವರು ವೃತ್ತಿ ಜೀವನ ಆರಂಭಿಸಿದ್ದರು.

            ಎಡಿಜಿಪಿಯಾಗಿ ಕೆಲಸ ನಿರ್ವಹಿಸದ್ದ ಕೆ.ವಿ.ಆರ್. ಠಾಗೋರ್ ವಾರ್ತಾ ಇಲಾಖೆಯಲ್ಲಿ ಎರಡು ಬಾರಿ ಆಯುಕ್ತರಾಗಿದ್ದರು. ಸದಾ ಹಸನ್ಮುಖಿ, ಮಾನವತಾವಾದಿಯಾಗಿ ಸರಳವಾಗಿದ್ದ ಠಾಗೋರ್ ಅವರು ಕೊರೊನಾ ಸೋಂಕಿನಿಂದ ಇಹಲೋಕ ತ್ಯಜಿಸಿದ್ದಾರೆ.

      ಕುವೆಂಪು ಅವರ ವಿಚಾರಧಾರೆಯನ್ನೇ ಜೀವ ಎಂದು ಪ್ರೀತಿಸಿ ಅದರಂತೆ ಜೀವಿಸಿದ ಸಹೃದಯಿ ಅಧಿಕಾರಿ. ಕ್ರಿಮಿನಾಲಜಿ ಬಗ್ಗೆ ಬಹು ಆಸಕ್ತಿ ಹೊಂದಿದ್ದ ಅವರು ವಿಶೇಷ ಅಧ್ಯಯನ ನಡೆಸಿದ್ದರು. ಮಾತ್ರವಲ್ಲ ಬಾಲಾಪರಾಧಿಗಳನ್ನು ಬದಲಾವಣೆ ಮಾಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಬಗ್ಗೆ ಬಹಳ ಆಸಕ್ತಿ ತೋರುತ್ತಿದ್ದರು. ಇದಕ್ಕಾಗಿ ವಿಶೇಷ ಅಧ್ಯಯನ ನಡೆಸಿದ್ದರು ಎಂದು ಅವರನ್ನು ಹತ್ತಿರದಿಂದ ಬಲ್ಲ ಪೊಲೀಸ್ ಅಧಿಕಾರಿ ಸ್ಮರಿಸಿದರು.

                         ಕಾಸರಗೋಡಿನೊಂದಿಗೆ ನಿಕಟತೆ:

       ಠಾಗೋರ್ ಅವರಿಗೆ ಕಾಸರಗೋಡಿನೊಂದಿಗೆ ಹೆಚ್ಚಿನ ನಿಕಟತೆ ದಶಕಗಳಿಂದಲೂ ಇದ್ದಿರುವುದು ಉಲ್ಲೇಖಾರ್ಹ. ಅವರು, ಕರ್ನಾಟಕ ಜಾನಪದ ಪರಿಷತ್ತು ಕೇಂದ್ರ ಘಟಕದ ಪ್ರಮುಖ ನಿರ್ದೇಶಕರೂ ಆಗಿದ್ದು, ಪರಿಷತ್ತಿನ ಕೇರಳ ಘಟಕದ ಹತ್ತಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕಾಸರಗೋಡಿಗೆ ಬರುತ್ತಿದ್ದರು. ಇಲ್ಲಿಯ ಕಲೆ, ಜಾನಪದ, ಜೀವನ ಶೈಲಿಗಳಿಂದ ಹೆಚ್ಚು ಪ್ರಭಾವಿತರಾಗಿದ್ದರು. ಠಾಗೋರರ ನಿಧನಕ್ಕೆ ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ತೀವ್ರ ಸಂತಾಪ ಸೂಚಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries